India vs Bangladesh, 2nd Test: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಮತ್ತು ಕೊನೇಯ ಪಂದ್ಯ ಇಂದಿನಿಂದ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೈದಾನದ ಔಟ್‌ಫೀಲ್ಡ್ ಒದ್ದೆಯಾಗಿದ್ದರಿಂದ ಟಾಸ್ ವಿಳಂಬವಾಗಿತ್ತು. ಇದೀಗ ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 280 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಇದರೊಂದಿಗೆ ತಂಡ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಇದರೊಂದಿಗೆ, 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಭಾರತ ಅಣಿಯಾಗುತ್ತಿದೆ.
ಹೇಗಿದೆ ಕಾನ್ಪುರ ಪಿಚ್?: ಕಾನ್ಪುರದ ಗ್ರೀನ್ ಪಾರ್ಕ್ ಭಾರತಕ್ಕೆ ಅದೃಷ್ಟದ ಪಿಚ್. ಏಕೆಂದರೆ, 1983ರಿಂದಲೂ ಇಲ್ಲಿ ತಂಡ ಯಾವುದೇ ಟೆಸ್ಟ್ ಪಂದ್ಯ ಸೋತಿಲ್ಲ. ಸತತ 41 ವರ್ಷಗಳಿಂದ ಗೆಲುವಿನ ಓಟ ಮುಂದುವರೆಸಿಕೊಂಡು ಬಂದಿದೆ. 1983ರಿಂದ ಈ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಒಟ್ಟು 9 ಟೆಸ್ಟ್ ಪಂದ್ಯಗಳನ್ನಾಡಿದ್ದು, 5ರಲ್ಲಿ ಜಯಿಸಿದೆ. ಇನ್ನುಳಿದ 4 ಪಂದ್ಯಗಳು ಡ್ರಾದಲ್ಲಿ ಮುಕ್ತಾಯ ಕಂಡಿವೆ. ಇಲ್ಲಿನ ಪಿಚ್ ಅನ್ನು ಕಪ್ಪು ಮಣ್ಣಿನಿಂದ ಸಿದ್ಧಪಡಿಸಲಾಗಿದ್ದು, ಸ್ಪಿನ್ ಬೌಲರ್ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಆದರೆ, ಮೊದಲೆರಡು ದಿನ ಪಿಚ್ ಸಮತಟ್ಟಾಗಿರುವುದರಿಂದ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಟೀಂ ಇಂಡಿಯಾ ಹೆಚ್ಚು ಸ್ಪಿನ್ ಬೌಲರ್‌ಗಳೊಂದಿಗೆ ಮೈದಾನಕ್ಕಿಳಿಯುವ ಸಾಧ್ಯತೆ ಇತ್ತು. ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮೊದಲ ಟೆಸ್ಟ್ ಪಂದ್ಯದ ಭಾಗವಾಗಿದ್ದರು. ಕುಲದೀಪ್ ಯಾದವ್ ಕಾನ್ಪುರ ನಿವಾಸಿಯಾಗಿದ್ದು, ಇಲ್ಲಿನ ಪಿಚ್ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ ಈ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಾಗಿತ್ತು. ಆದ್ರೆ ನಾಯಕ ರೋಹಿತ್ ಶರ್ಮಾ ಮೂವರು ಸೀಮರ್ಗಳನ್ನು ಕಣಕ್ಕಿಳಿಸಿದ್ದರಿಂದ ಕುಲದೀಪ್ ಯಾದವ್ ಅವರಿಗೆ ಅವಕಾಶ ಕೈ ತಪ್ಪಿದಂತಾಗಿದೆ.
ತಂಡಗಳು- ಭಾರತ 11ರ ಬಳಗ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ 11ರ ಬಳಗ: ಶದ್ಮನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಹಸನ್ ಮಹಮೂದ್, ಖಲೀದ್ ಅಹ್ಮದ್.
ಇದನ್ನೂ ಓದಿ: ಟಿ-20, ಟೆಸ್ಟ್ ಕ್ರಿಕೆಟ್ನಿಂದ ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ ವಿದಾಯ - Shakib Al Hasan retires