Ind vs Aus 2nd test: ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ.
ಅಡಿಲೇಡ್ನಲ್ಲಿ ನಡೆದ ಹಗಲು/ರಾತ್ರಿಯ ಪಿಂಕ್ ಬಾಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತೊಮ್ಮೆ ಪಾರಮ್ಯ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ಗಳಿಗೆ ಸರ್ವಪತನ ಕಂಡಿದ್ದ ಭಾರತ 157 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಇದರಲ್ಲೂ ಭಾರತೀಯ ಬ್ಯಾಟರ್ಗಳು ರನ್ ಗಳಿಸುವಲ್ಲಿ ವಿಫಲರಾದ ಕಾರಣ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 175ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾಗೆ ಕೇವಲ 19ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಆತಿಥೇಯ ತಂಡ ಸುಲಭವಾಗಿ ಸಾಧಿಸಿ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿತು.
Massive win in Adelaide for Australia as they level the series 1-1 💪#WTC25 | #AUSvIND 📝: https://t.co/D4QfJY2DY1 pic.twitter.com/RXZusN98wU
— ICC (@ICC) December 8, 2024
ಎರಡನೇ ದಿನ 128ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಭಾರತ, ಮೂರನೇ ದಿನದಾಟ ಆರಂಭಿಸಿತ್ತು. ರಿಷಬ್ ಪಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕ್ರೀಸ್‌ನಲ್ಲಿದ್ದರು. ಈ ಇಬ್ಬರು ತಂಡದ ಸ್ಕೋರ್ ಹೆಚ್ಚಿಸುತ್ತಾರೆ ಎಂದೇ ನಂಬಲಾಗಿತ್ತು. ಆದರೆ ಸ್ಟಾರ್ಕ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಪಂತ್ ಅವರ ವಿಕೆಟ್ ಉರುಳಿಸಿ ಭಾರತಕ್ಕೆ ಶಾಕ್ ನೀಡಿದರು. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ 42 ರನ್ ಗಳಿಸುತ್ತಿದ್ದಂತೆ ಕಮಿನ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.
ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ; ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ನಲ್ಲಿ ಭಾರತ ಹೀನಾಯವಾಗಿ ಸೋಲನುಭವಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲೂ ಭಾರೀ ಹಿನ್ನಡೆ ಅನುಭವಿಸಿದೆ. ಈವರೆಗೆ ಅಗ್ರಸ್ಥಾನದಲ್ಲಿದ್ದ ಭಾರತ ಇದೀಗ 3ನೇ ಸ್ಥಾನಕ್ಕೆ ಕುಸಿದಿದೆ. ಭಾರತವನ್ನು ಮಣಿಸಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ. WTC ಅಂಕಪಟ್ಟಿಯಲ್ಲಿ ಕಾಂಗರೂ ಪಡೆ 60.71 ಶೇಕಡವಾರು ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯವನ್ನು ಸೋಲುತ್ತಿದ್ದಂತೆ ಭಾರತ 59.26 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದೆ. ಸದ್ಯ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.
ಸದ್ಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮಧ್ಯೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಒಂದು ವೇಳೆ ಈ ಪಂದ್ಯವನ್ನು ಗೆಲ್ಲುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾದರೆ, WTಯಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ತಲುಪಲಿದೆ.