ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಗುಜರಾತ್ ಟೈಟನ್ಸ್ 200 ರನ್ ಕಲೆ ಹಾಕಿದೆ. ಶುಭ್‌ಮನ್ ಗಿಲ್ ಅವರ ಜವಾಬ್ದಾರಿಯುತ ಆಟದ ಫಲವಾಗಿ ಜಿಟಿ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು. ಪಂಜಾಬ್ ತಂಡದಿಂದ ಉತ್ತಮ ಬೌಲಿಂಗ್ ಪ್ರದರ್ಶನ ಕಂಡುಬರಲಿಲ್ಲ.
ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಗುಜರಾತ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಶುಭ್‌ಮನ್ ಗಿಲ್ ಮತ್ತು ಅನುಭವಿ ಆಟಗಾರ ವೃದ್ದಿಮಾನ್ ಸಹಾ ಇನಿಂಗ್ಸ್ ಆರಂಭಿಸಿದರು. ಆದರೆ ಈ ಜೋಡಿಯಿಂದ ಹೇಳಿಕೊಳ್ಳುವಂತಹ ಆಟ ಮೂಡಿಬರಲಿಲ್ಲ.
11 ರನ್ ಗಳಿಸಿ ವೃದ್ದಿಮಾನ್ ಸಹಾ ವಿಕೆಟ್ ಕಳೆದುಕೊಂಡರು. ಬಳಿಕ ಜಿಟಿ ಪರ ಈ ಋತುವಿನಲ್ಲಿ ಮೊದಲ ಪಂದ್ಯವಾಡಿದ ಕ್ಲಾಸಿಕ್ ಬ್ಯಾಟರ್ ಕೇನ್ ವಿಲಿಯಮ್ಸನ್ ಆಕರ್ಷಕ ನಾಲ್ಕು ಬೌಂಡರಿ ಸಿಡಿಸಿ ಔಟಾದರು. ಮೊದಲೆರಡು ವಿಕೆಟ್ ಕಳೆದುಕೊಂಡ ಜಿಟಿಗೆ ಗಿಲ್ ಹಾಗು ಭರವಸೆಯ ಆಟಗಾರ ಸಾಯಿ ಸುದರ್ಶನ್ ಆಸರೆಯಾದರು. ಪಂಜಾಬ್ ಬೌಲರ್‌ಗಳನ್ನು ಬೆಂಡೆತ್ತಿದ ಈ ಜೋಡಿ ತಂಡದ ಮೊತ್ತ ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಈ ಹಂತದಲ್ಲಿ ಜಿಟಿ ರನ್ ವೇಗಕ್ಕೆ ಬ್ರೇಕ್ ಹಾಕಲು ಬಂದ ಹರ್ಷಲ್ ಪಟೇಲ್, ಸಾಯಿ ಸುದರ್ಶನ್ ವಿಕೆಟ್ ಪಡೆದರು. ಹೀಗಾಗಿ 19 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 33 ರನ್ಗಳಿಗೆ ಆಟ ನಿಲ್ಲಿಸಬೇಕಾಯಿತು. ನಂತರ ಬಂದ ಮಾಧ್ಯಮ ಕ್ರಮಾಂಕದ ಬ್ಯಾಟರ್ ವಿಜಯ್ ಶಂಕರ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿ 8 ರನ್ಗಳಿಗೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಕೊನೆಯಲ್ಲಿ ಆಗಮಿಸಿದ ರಾಹುಲ್ ತೆವಾಟಿಯಾ 8 ಎಸೆತಗಳನ್ನೆದುರಿಸಿ 23 ರನ್ ಸಿಡಿಸಿದರು. ಇತ್ತ ಆರಂಭಿಕನಾಗಿ ಕ್ರೀಸ್ಗಿಳಿದ ಗಿಲ್ ತನ್ನ ನಾಯಕ ಸ್ಥಾನದ ಜವಾಬ್ದಾರಿ ಮರೆಯದೆ ಆಕ್ರಮಣಕಾರಿ ಆಟ ಮುಂದುವರೆಸಿದರು. ಸಿಡಿಲಬ್ಬರ ಬ್ಯಾಟಿಂಗ್ ಮಾಡಿದ ಗಿಲ್ ಕೇವಲ 48 ಎಸೆತಗಳಲ್ಲಿ ಮನಮೋಹಕ 4 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 89 ರನ್ ದಾಖಲಿಸಿ ಅಜೇಯರಾಗುಳಿದರು.
ಪಂಜಾಬ್ ಪರ ಬೌಲಿಂಗ್ನಲ್ಲಿ ಕಗಿಸೊ ರಾಬಾಡ 2 ವಿಕೆಟ್, ಹರ್‌ಪ್ರೀತ್ ಬ್ರಾರ್ ಮತ್ತು ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ಗೆ ತೃಪ್ತಿಪಟ್ಟರು.
ತಂಡಗಳು: ಪಂಜಾಬ್ ಕಿಂಗ್ಸ್ : ಶಿಖರ್ ಧವನ್(ನಾಯಕ), ಜಾನಿ ಬೈರ್‌ಸ್ಟೋವ್, ಜಿತೇಶ್ ಶರ್ಮಾ(ವಿ.ಕೀ), ಪ್ರಭ್‌ಸಿಮ್ರಾನ್ ಸಿಂಗ್, ಸ್ಯಾಮ್ ಕರ್ರಾನ್, ಶಶಾಂಕ್ ಸಿಂಗ್, ಸಿಕಂದರ್ ರಾಜಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ(ವಿ.ಕೀ), ಶುಭ್‌ಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ದರ್ಶನ್ ನಲ್ಕಂಡೆ
ಇದನ್ನೂ ಓದಿ: ಐಪಿಎಲ್: ಮುಂದಿನ ಪಂದ್ಯದಲ್ಲಿ ಮುಂಬೈ ಪರ ಈ ಆಟಗಾರ ಕಣಕ್ಕಿಳಿಯುವ ಸಾಧ್ಯತೆ! - Mumbai Indians