Ab de Villiers Kannada Comment: ಕ್ರಿಕೆಟ್ ಲೋಕದ ದಿಗ್ಗಜ ಆಟಗಾರರಲ್ಲಿ ಎಬಿ ಡಿವಿಲಿಯರ್ಸ್ ಒಬ್ಬರು. 'ಮಿಸ್ಟರ್ 360' ಎಂದೇ ಕರೆಯಲ್ಪಡುವ ಎಬಿಡಿ ಕ್ರಿಕೆಟ್ನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ ಮತ್ತು ಮುರಿದಿದ್ದಾರೆ. ಅಲ್ಲದೇ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯೂ ಇವರ ಹೆಸರಲ್ಲಿದೆ.
14 ವರ್ಷ ಕ್ರಿಕೆಟ್ನಲ್ಲಿ ಮಿಂಚಿದ ಎಬಿಡಿ ಎಲ್ಲ ಮೂರು ಸ್ವರೂಪಗಳಲ್ಲಿ 20 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ಏಕಾಂಗಿಯಾಗಿ ನಿಂತು ಪಂದ್ಯಗಳನ್ನು ಗೆದ್ದುಕೊಂಡ ನಿದರ್ಶನಗಳೂ ಇವೆ. ಇಂತಹ ಮಹಾನ್ ಕ್ರಿಕೆಟರ್ಗೆ ಇತ್ತೀಚೆಗೆ ಐಸಿಸಿ 'ಹಾಲ್ ಆಫ್ ಫೇಮ್' ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಕ್ಕೆ ಹಲವು ದಿಗ್ಗಜರು ಅಭಿನಂದನೆ ತಿಳಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಕೂಡ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ, ಹಾಲ್ ಆಫ್ ಪೇಮ್ ಪ್ರಶಸ್ತಿ ಜೊತೆಗೆ ಡಿವಿಲಿಯರ್ಸ್ ಅವರ ಫೋಟೋ ಹಂಚಿಕೊಂಡು ಅಭಿನಂದಿಸಿತ್ತು. ಇದಕ್ಕೆ ಪ್ರತಿಯಾಗಿ ಡಿವಿಲಿಯರ್ಸ್ ಕನ್ನಡದಲ್ಲೇ 'ಧನ್ಯವಾದ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಕೆಲವು ಫ್ಯಾನ್ಸ್, ಒಂದೇ ಹೃದಯವನ್ನು ಎಷ್ಟು ಬಾರಿ ಗೆಲ್ತೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸ್ತುತ ಎಬಿಡಿ ದಕ್ಷಿಣ ಆಫ್ರಿಕಾ ಟಿ20 ಲೀಗ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Honours come and go, but this frame, this frame right here will always be immortal. ❤️
— Royal Challengers Bengaluru (@RCBTweets) October 24, 2024
ABD, you deserve this. 🙌@ABdeVilliers17 | #PlayBold pic.twitter.com/MxR8vlFIte
ಆಪತ್ಬಾಂಧವ ಎಡಿಬಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 2011ರಿಂದ ಆರ್ಸಿಬಿ ಪ್ರತಿನಿಧಿಸಿದ್ದ ಎಬಿಡಿ, ತಂಡದ ಆಪತ್ಬಾಂಧವನಾಗಿದ್ದರು. ಹಲವು ಬಾರಿ ತಂಡದ ಸಂಕಷ್ಟ ಸಮಯದಲ್ಲಿ ಏಕಾಂಗಿಯಾಗಿ ಹೋರಾಡಿ ಗೆಲುವು ತಂದುಕೊಟ್ಟಿದ್ದರು. 2021ರಲ್ಲಿ ಐಪಿಎಲ್ಗೆ ಗುಡ್ಬೈ ಹೇಳಿದ್ದರು.
ಎಬಿಡಿ ಐಪಿಎಲ್ ದಾಖಲೆ: ಐಪಿಎಲ್ ಚುಟುಕು ಕ್ರಿಕೆಟ್ನಲ್ಲಿ ಒಟ್ಟು 184 ಪಂದ್ಯಗಳನ್ನು ಆಡಿರುವ ಡಿವಿಲಿಯರ್ಸ್ 5,162 ರನ್ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 40 ಅರ್ಧಶತಕ, 3 ಶತಕ ಸೇರಿವೆ. 133 ಇವರ ಹೈಸ್ಕೋರ್ ಆಗಿದೆ. ಇದಷ್ಟೇ ಅಲ್ಲದೇ, ಐಪಿಎಲ್ ವೃತ್ತಿಜೀವನದಲ್ಲಿ 413 ಬೌಂಡರಿ, 251 ಸಿಕ್ಸರ್ ಸಿಡಿಸಿದ್ದಾರೆ.
ಇದನ್ನೂ ಓದಿ: 'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ಗೆ ನಿವೃತ್ತಿ ಘೋಷಿಸಲಿ': ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಆಕ್ರೋಶ