ಧರ್ಮಶಾಲಾ: ಇಂಗ್ಲೆಂಡ್ ಮತ್ತು ಭಾರತದ ನಡುವಿನ 5ನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ವಿಶ್ವದ ಸುಂದರ ಕ್ರೀಡಾಂಗಣಗಳಲ್ಲಿ ಒಂದಾದ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಇಂದು (ಗುರುವಾರ) ಆರಂಭವಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್ನ ಹಿರಿಯ ಬ್ಯಾಟರ್ ಜಾನಿ ಬೈರ್ಸ್ಟೋವ್ಗೆ ಇದು 100ನೇ ಟೆಸ್ಟ್ ಆಗಿರುವುದು ವಿಶೇಷ.
ಸರಣಿಯನ್ನು 3-1 ರಲ್ಲಿ ತನ್ನ ಕೈವಶ ಮಾಡಿಕೊಂಡಿರುವ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಸ್ಥಾನದಲ್ಲಿದ್ದು, ಅಂಕಗಳನ್ನು ಹೆಚ್ಚಿಸಿಕೊಳ್ಳಲು ಆಡಲಿದೆ. ಇನ್ನು ಪ್ರವಾಸಿ ಇಂಗ್ಲೆಂಡ್ ಮೊದಲ ಪಂದ್ಯವನ್ನು ಗೆದ್ದ ಬಳಿಕ ಸತತ ಮೂರರಲ್ಲಿ ಸೋತು ಸರಣಿ ಸೋಲಿನ ನಿರಾಸೆ ಅನುಭವಿಸಿದೆ. ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿಯ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಹೋರಾಡಲಿದೆ.
ಕನ್ನಡಿಗ ಪಡಿಕ್ಕಲ್ ಪದಾರ್ಪಣೆ: ಒಂದು ವಾರಕ್ಕೂ ಅಧಿಕ ವಿಶ್ರಾಂತಿ ಪಡೆದಿರುವ ಉಭಯ ತಂಡಗಳ ಆಟಗಾರರು ಹೊಸ ಹುರುಪಿನಲ್ಲಿ ಮೈದಾನಕ್ಕೆ ಇಳಿದಿದ್ದಾರೆ. ರಣಜಿಯಲ್ಲಿ ರಾಶಿ ರಾಶಿ ರನ್ ಕಲೆ ಹಾಕಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಆರಂಭಿಸಿದರು. ಅಭ್ಯಾಸದ ವೇಳೆ ರಜತ್ ಪಾಟೀದಾರ್ ಪಾದದ ಗಾಯಕ್ಕೆ ತುತ್ತಾದ ಕಾರಣ ಪಡಿಕ್ಕಲ್ಗೆ ಅವಕಾಶ ನೀಡಲಾಗಿದೆ.
ಮಾರ್ಚ್ 6 ರಂದು ತರಬೇತಿ ನಡೆಸುತ್ತಿದ್ದ ವೇಳೆ ಪಾಟೀದಾರ್ ಎಡ ಪಾದಕ್ಕೆ ಗಾಯವಾಗಿದೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದು, ಅವರ ಬದಲಿಗೆ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಪಂದ್ಯ ಆರಂಭಕ್ಕೂ ಮುನ್ನ ಮಾಹಿತಿ ನೀಡಿದೆ.
ಇನ್ನೂ, ಪರಿಷ್ಕೃತ ತಂಡದಲ್ಲಿ ಭಾರತದ ಬೌಲಿಂಗ್ ಟ್ರಂಪ್ಕಾರ್ಡ್ ಜಸ್ಪ್ರೀತ್ ಬುಮ್ರಾ ಕಮ್ಬ್ಯಾಕ್ ಮಾಡಿದ್ದಾರೆ. ಇದರಿಂದಾಗಿ ಯುವ ವೇಗಿ ಆಕಾಶ್ದೀಪ್ ಸ್ಥಾನ ತೆರವು ಮಾಡಿದ್ದಾರೆ. ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಇತ್ತ ಸೋಲಿನ ಸುಳಿಯಲ್ಲಿರುವ ಇಂಗ್ಲೆಂಡ್ ಒಂದು ಬದಲಾವಣೆ ಮಾಡಿದೆ. ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್ರನ್ನು ಕಣಕ್ಕಿಳಿಸಿದೆ.
ತಂಡಗಳು ಇಂತಿವೆ- ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಶೋಯೆಬ್ ಬಶೀರ್.
ಇದನ್ನೂ ಓದಿ: ರಣಜಿ: ಮಧ್ಯಪ್ರದೇಶ ವಿರುದ್ಧ 62 ರನ್ಗಳಿಂದ ಗೆದ್ದ ವಿದರ್ಭ, ಫೈನಲ್ನಲ್ಲಿ ಮುಂಬೈ ಜೊತೆ ಸೆಣಸು