Pepper Rice Recipe In Kannada: ಬೆಳಿಗ್ಗೆ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಮಕ್ಕಳಿಗೆ ಊಟದ ಡಬ್ಬಿ ಸಿದ್ಧಪಡಿಸುವುದು ತಾಯಂದಿರಿಗೆ ದಿನನಿತ್ಯದ ಸವಾಲು. ಮನೆಗೆಲಸ ಪ್ರಾರಂಭಿಸಿ ಉಪಹಾರ ಮಾಡುವುದು, ಮತ್ತೆ ಊಟದ ಡಬ್ಬಿ ತಯಾರು ಮಾಡೋದು, ಬೇರೆ ಬೇರೆ ಕೆಲಸಗಳನ್ನು ನೋಡಿಕೊಳ್ಳೋದು ತುಂಬಾ ಅವಸರವಾಗುತ್ತದೆ. ಹಾಗಾಗಿ, ಇರುವ ಅಲ್ಪಾವಧಿಯಲ್ಲಿ ಬಿಳಿ ಅನ್ನ, ಸಾಂಬಾರ್, ಪಲ್ಯ ಇರುವ ಊಟದ ಬಾಕ್ಸ್ ಕಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ.
ಕೆಲವೊಮ್ಮೆ ಮಕ್ಕಳು ಊಟದ ಡಬ್ಬಿಯನ್ನು ಪೂರ್ತಿಯಾಗಿ ತಿನ್ನದೇ ಮನೆಗೆ ತರುತ್ತಾರೆ. ನಿಮ್ಮ ಮಕ್ಕಳು ಅದೇ ರೀತಿ ಮಾಡುತ್ತಾರೆಯೇ? ಹಾಗಾದ್ರೆ, ನಾವು ನಿಮಗಾಗಿ ಲಂಚ್ ಬಾಕ್ಸ್ನ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಅದುವೇ ಸೂಪರ್ ಟೇಸ್ಟಿ ಮತ್ತು ಆರೋಗ್ಯಕರ ಅಡುಗೆ 'ಪೆಪ್ಪರ್ ರೈಸ್'. ಪೆಪ್ಪರ್ ರೈಸ್ ತಯಾರಿಸಿ ನಿಮ್ಮ ಮಕ್ಕಳಿಗೆ ಲಂಚ್ ಬಾಕ್ಸ್ ಕಟ್ಟಿದರೆ, ಅವರು ಇಷ್ಟಪಟ್ಟು ತಿನ್ನಬಹುದು. ಈ ರೈಸ್ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ತಡ ಮಾಡದೇ ಕೆಲವೇ ನಿಮಿಷಗಳಲ್ಲಿ ಪೆಪ್ಪರ್ ರೈಸ್ ಮಾಡೋದು ಹೇಗೆ ಎಂಬುದನ್ನು ತಿಳಿಯೋಣ.
ಪೆಪ್ಪರ್ ರೈಸ್ಗೆ ಬೇಕಾಗುವ ಪದಾರ್ಥಗಳು:
- ಈರುಳ್ಳಿ - 2
- ಒಣ ಮೆಣಸಿನಕಾಯಿ- 4
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
- ಅಕ್ಕಿ - 2 ಕಪ್
- ಕರಿಮೆಣಸು - ಟೀಸ್ಪೂನ್
- ಜೀರಿಗೆ - ಟೀಸ್ಪೂನ್
- ಬೆಳ್ಳುಳ್ಳಿ ಎಸಳು - 15
- ಕರಿಬೇವಿನ ಎಲೆಗಳು -2
- ಟೊಮೆಟೊ - 2
- ಅರಿಶಿನ - ಅರ್ಧ ಟೀಸ್ಪೂನ್
- ಒಂದು ಚಿಟಿಕೆ ಇಂಗು
- ಗೋಡಂಬಿ - ಸ್ವಲ್ಪ
- ಕೊತ್ತಂಬರಿ ಸೊಪ್ಪು - ಸ್ವಲ್ಪ
ತಯಾರಿಸುವ ವಿಧಾನ ಹೇಗೆ?:
- ಒಲೆ ಆನ್ ಮಾಡಿ, ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ. (ನೀವು ಬಯಸಿದರೆ ತುಪ್ಪ ಸಹ ಬಳಸಬಹುದು.)
- ಎಣ್ಣೆ ಬಿಸಿಯಾದ ನಂತರ ಒಂದು ಪಾತ್ರೆಯಲ್ಲಿ ಕರಿಮೆಣಸು, ಒಣ ಮೆಣಸಿನಕಾಯಿ ಮತ್ತು ಜೀರಿಗೆ ಹಾಕಿ ಹುರಿಯಿರಿ. ಹುರಿದ ನಂತರ ಅವುಗಳನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
- ಈಗ ಅದೇ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮತ್ತು ಕತ್ತರಿಸಿದ ಬೆಳ್ಳುಳ್ಳಿ ಎಸಳು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ. ಬೆಳ್ಳುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ನಂತರ ಇಂಗು, ಗೋಡಂಬಿ ಮತ್ತು ಈರುಳ್ಳಿ ತುಂಡುಗಳನ್ನು ಹಾಕಿ ಫ್ರೈ ಮಾಡಿ.
- ಜೊತೆಗೆ ಟೊಮೆಟೊ ಚೂರುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ. ಈಗ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹುರಿಯಿರಿ.
- ನಂತರ ಇದರೊಳಗೆ ಬೇಯಿಸಿದ ಅನ್ನವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಜೊತೆಗೆ ಸಣ್ಣಗೆ ಕತ್ತರಿಸಿದ ಕೆಂಪು ಮೆಣಸಿನಕಾಯಿ- ಕರಿಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಸ್ಟವ್ ಆಫ್ ಮಾಡುವ ಮೊದಲು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ.
- ಹೀಗೆ ಸಿಂಪಲ್ ಆಗಿ ಮಾಡಿದರೆ ಸಾಕು ಐದೇ ನಿಮಿಷದಲ್ಲಿ ನಿಮ್ಮ ಮುಂದೆ ಕಾಳು ಮೆಣಸು ರೈಸ್ ರೆಡಿ!
- ಈ ರೈಸ್ ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕೆನಿಸುತ್ತದೆ.
- ಇಷ್ಟವಾದಲ್ಲಿ ಮನೆಯಲ್ಲೊಮ್ಮೆ ಈ ಪೆಪ್ಪರ್ ರೈಸ್ ಟ್ರೈ ಮಾಡಿ ನೋಡಿ.