ಕೊಲ್ಲಾಪುರದಲ್ಲಿ ದೇಶಿ, ವಿದೇಶಿ ತಳಿಗಳ ಕ್ಯಾಟ್ ಶೋ: ಗಮನ ಸೆಳೆದ ಹುಲಿಯಂತಿರುವ ಬೆಂಗಾಲ್ ಬೆಕ್ಕು, ಇವುಗಳ ಬೆಲೆ, ಅಬ್ಬಾ! - CAT SHOW IN KOLHAPUR
ಫೆಲೈನ್ ಕ್ಲಬ್ ಆಫ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಿಶಿಷ್ಟ 'ಕ್ಯಾಟ್ ಶೋ' ನಡೆಯಿತು. ಭಾರತ ಸೇರಿದಂತೆ ವಿದೇಶಗಳ ಬೆಕ್ಕುಗಳು ಪ್ರದರ್ಶನದಲ್ಲಿ ಕಾಣಿಸಿಕೊಂಡವು.
Published : Dec 2, 2024, 6:17 PM IST
ಮುಂಬೈ(ಮಹಾರಾಷ್ಟ್ರ): ಫೆಲೈನ್ ಕ್ಲಬ್ ಆಫ್ ಇಂಡಿಯಾ ವತಿಯಿಂದ ಕೊಲ್ಲಾಪುರದಲ್ಲಿ ಭಾನುವಾರ ಆಯೋಜಿಸಿದ್ದ ‘ಕ್ಯಾಟ್ ಶೋ’ನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಅಪರೂಪದ ಬೆಕ್ಕುಗಳನ್ನು ವೀಕ್ಷಿಸಲು ಸಾವಿರಾರು ಜನ ಸೇರಿದ್ದರು.
ಪ್ರದರ್ಶನದಲ್ಲಿ ವಿವಿಧ ತಳಿಯ 200ಕ್ಕೂ ಹೆಚ್ಚು ಬೆಕ್ಕುಗಳಿದ್ದವು. ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಪರ್ಷಿಯನ್ ಕ್ಯಾಟ್, ಕ್ಲಾಸಿಕ್ ಲಾಂಗ್ ಹೇರ್, ಬೆಂಗಾಲ್ ಕ್ಯಾಟ್, ಮೈನೆ ಕೂನ್, ಎಕ್ಸೋಟಿಕ್ ಶಾರ್ಟ್ ಕ್ಯಾಟ್, ಬ್ರಿಟಿಷ್ ಶಾರ್ಟ್ ಹೇರ್, ಸೈಬೀರಿಯನ್ ಕ್ಯಾಟ್, ಒರಿವೋ, ಸಿಯಾಮೀಸ್, ಇಂಡಿಯನ್ ಬ್ರೀಡ್ ಇಂಡಿ ಮೌ ಸೇರಿದಂತೆ ವಿವಿಧ ತಳಿಗಳ ಬೆಕ್ಕುಗಳನ್ನು ಜನರು ಕಣ್ತುಂಬಿಕೊಂಡರು.
ಗಮನಸೆಳೆದ ದೇಶಿ ಬೆಕ್ಕುಗಳು: ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ವಿವಿಧ ತಳಿಯ ಬೆಕ್ಕುಗಳು ಬಂದಿದ್ದವು. ಈ ಮಧ್ಯೆ ಬೆಂಗಾಲ್ ಹುಲಿಯಂತೆ ಕಾಣುತ್ತಿದ್ದ ಬೆಂಗಾಲ್ ಬೆಕ್ಕು ಪ್ರಮುಖ ಆಕರ್ಷಣೆಯಾಗಿತ್ತು. ಪ್ರದರ್ಶನದಲ್ಲಿ ಪಾಲ್ಗೊಂಡ ಬೆಕ್ಕುಗಳಿಗೆ 5 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೂ ಬೆಲೆ ಇತ್ತು.
ಬೆಕ್ಕುಗಳ ಆರೈಕೆಯ ಬಗ್ಗೆ ಮಾಹಿತಿ: ಬೆಕ್ಕುಗಳ ಆರೈಕೆ ಹೇಗೆ ಮಾಡಬೇಕು? ಅವುಗಳಿಗೆ ಲಸಿಕೆ ಹಾಕಿಸುವುದು ಹೇಗೆ?, ಬೆಕ್ಕುಗಳಿಗೆ ಆಹಾರ ಕ್ರಮ ಹೇಗಿರಬೇಕು ಎನ್ನುವ ಕುರಿತು ಪ್ರದರ್ಶನದಲ್ಲಿ ಮಾಹಿತಿ ನೀಡಲಾಯಿತು.
2019ರಲ್ಲಿ ಮೊದಲ ಬಾರಿಗೆ ನಡೆದ ಕ್ಯಾಟ್ ಶೋ: ಕಳೆದ ಕೆಲವು ವರ್ಷಗಳಿಂದ ಕೊಲ್ಲಾಪುರದಲ್ಲಿ ಸಾಕುಪ್ರಾಣಿಗಳನ್ನು ಸಾಕುವ ಕ್ರೇಜ್ ಹೆಚ್ಚಾಗಿದೆ. ಫೆಲೈನ್ ಕ್ಲಬ್ ಆಫ್ ಇಂಡಿಯಾ ಸಂಸ್ಥೆ 2019ರಲ್ಲಿ ಮೊದಲ ಬಾರಿಗೆ ಕೊಲ್ಲಾಪುರದಲ್ಲಿ ಬೆಕ್ಕು ಪ್ರದರ್ಶನ ಆಯೋಜಿಸಿತ್ತು. ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಇಲ್ಲಿ ಕ್ಯಾಟ್ ಶೋ ಆಯೋಜಿಸಲಾಗಿದೆ.
ಇದನ್ನೂ ಓದಿ: ಮಾಧವ್ ನ್ಯಾಷನಲ್ ಪಾರ್ಕ್ ಇದೀಗ ಮಧ್ಯಪ್ರದೇಶದ 8ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ