ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದು ಹೊರಗಿರುವ ನಟ ದರ್ಶನ್ ಬಳಿಯಿರುವ ಗನ್ ಅನ್ನ ಆರ್.ಆರ್.ನಗರ ಪೊಲೀಸರು ಸೀಜ್ ಮಾಡಿದ್ದಾರೆ. ಗನ್ ಪರವಾನಗಿ ರದ್ದು ಹಿನ್ನೆಲೆಯಲ್ಲಿ ಪೊಲೀಸರು, ದರ್ಶನ್ ನಿವಾಸಕ್ಕೆ ತೆರಳಿ ಗನ್ ವಾಪಸ್ ಪಡೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ಪ್ರಕರಣದ ಎರಡನೇ ಆರೋಪಿಯಾಗಿರುವ ದರ್ಶನ್ ಬಳಿಯಿದ್ದ ಪರವಾನಗಿ ಗನ್ ರದ್ದು ಸಂಬಂಧ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ದರ್ಶನ್, ನಾನೊಬ್ಬ ನಟನಾಗಿದ್ದು ತನಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನಿಂದ ಹೊರಗೆ ಸಹ ಪ್ರಯಾಣಿಸುವೆ. ನನ್ನ ಭದ್ರತೆ ಸಲುವಾಗಿ ಬಂದೂಕು ಬಳಕೆ ಅಗತ್ಯವಾಗಿದೆ. ಅಲ್ಲದೇ ಕಾನೂನಾತ್ಮಕವಾಗಿ ಗನ್ ಪಡೆದುಕೊಂಡಿದ್ದು ಯಾವುದೇ ಷರತ್ತು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿ ಶಸ್ತ್ರಾಸ್ತ್ರ ಕಾಯ್ದೆ 1959ರ ಸೆಕ್ಷನ್ 10ರಡಿ ವ್ಯಕ್ತಿ ವಿರುದ್ಧ ಕ್ರಿಮಿನಲ್ ಆರೋಪವಿದ್ದರೆ ರದ್ದು ಮಾಡುವ ಅಧಿಕಾರವಿದ್ದು, ಈ ಆಧಾರದಡಿ ಗನ್ ಲೈಸೆನ್ಸ್ ಅನ್ನ ತಾತ್ಕಾಲಿಕವಾಗಿ ರದ್ದು ಮಾಡಿದ್ದರು. ಗನ್ ಹಿಂತಿರುಗಿಸುವಂತೆ ನೋಟಿಸ್ ಜಾರಿಗೆ ಆರ್.ಆರ್.ನಗರ ಪೊಲೀಸರು ಮುಂದಾದಾಗ ದರ್ಶನ್ ನೋಟಿಸ್ ಪಡೆದು ಗನ್ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಟ ದರ್ಶನ್ ಬಳಿಯ ಗನ್ ಲೈಸೆನ್ಸ್ ತಾತ್ಕಾಲಿಕ ಅಮಾನತು - DARSHAN GUN LICENSE
ಕಳೆದ ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪದಡಿ ಜೂ.8ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಂತ - ಹಂತವಾಗಿ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಎಲ್ಲಾ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.