How to Make Corn Vada: ನಮ್ಮಲ್ಲಿ ಹಲವರು ಸಿಹಿ ಹಾಗೂ ಖಾರವಾದ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ. ಹಬ್ಬಗಳಿರಲಿ ಅಥವಾ ಶುಭ ಸಮಾರಂಭಗಳಿರಲಿ, ಇಲ್ಲವೇ ಸಮಯ ಸಿಕ್ಕಾಗಲೆಲ್ಲಾ ಗರಿಗರಿಯಾದ ತಿನಿಸುಗಳನ್ನು ಮಾಡಿ ಸೇವಿಸುತ್ತೇವೆ. ಬಹುತೇಕರು ವಿವಿಧ ಧಾನ್ಯಗಳಿಂದ ರೆಡಿ ಮಾಡಿರುವ ವಡೆಗಳನ್ನು ತಿನ್ನುತ್ತಾರೆ. ಇದೀಗ ಸಂಕ್ರಾಂತಿ ಹಬ್ಬದ ಹಿನ್ನೆಲೆ ನಾವು ನಿಮಗಾಗಿ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಅದುವೇ, ಗರಿಗರಿಯಾದ ಮೆಕ್ಕೆಜೋಳದ ವಡೆ. ಸಾಮಾನ್ಯ ವಡೆಗಳಿಗಿಂತಲೂ ಇವು ಹೆಚ್ಚು ರುಚಿಕರವಾಗಿರುತ್ತವೆ.
ಕಾರ್ನ್ ವಡೆಗಳನ್ನು ಮಾಡುವುದು ಕೂಡ ತುಂಬಾ ಸುಲಭವಾಗಿದೆ. ಈ ವಡೆಗಳನ್ನು ಕೆಲವೇ ಪದಾರ್ಥಗಳಿಂದ ಹಾಗೂ ಕಡಿಮೆ ಸಮಯದಲ್ಲಿ ಸಖತ್ ಟೇಸ್ಟಿಯಾಗಿ ತಯಾರಿಸಬಹುದು. ಕಾರ್ನ್ ವಡೆ ತಯಾರಿಸಲು ಬೇಕಾದ ಪದಾರ್ಥಗಳೇನು ಹಾಗೂ ತಯಾರಿಸುವ ವಿಧಾನದ ಕುರಿತು ತಿಳಿದುಕೊಳ್ಳೋಣ.
ಇದನ್ನೂ ಓದಿ: ಸಂಕ್ರಾಂತಿ ವಿಶೇಷ: ರವೆ ಲಡ್ಡು ಹೀಗೆ ಮಾಡಿದರೆ, ತಿಂಗಳವರೆಗೆ ಸಾಫ್ಟ್ & ತಾಜಾ ಆಗಿರುತ್ತೆ!
ಕಾರ್ನ್ ವಡೆ ಸಿದ್ಧಪಡಿಸಲು ಅಗತ್ಯವಿರುವ ಪದಾರ್ಥಗಳು:
- ಮೆಕ್ಕೆಜೊಳದ (ಕಾರ್ನ್) ಕಾಳು - 2 ಕಪ್
- ಹಸಿ ಮೆಣಸಿನಕಾಯಿ - 2
- ಒಣಮೆಣಸಿನಕಾಯಿ - 2
- ಶುಂಠಿ - ಒಂದು ಇಂಚು
- ಸಿಪ್ಪೆ ಸುಲಿದಿರುವ ಬೆಳ್ಳುಳ್ಳಿ ಎಸಳುಗಳು - 4
- ಜೀರಿಗೆ - ಅರ್ಧ ಟೀಸ್ಪೂನ್
- ಉಪ್ಪು - ರುಚಿಗೆ ಬೇಕಾಗುಷ್ಟು
- ಕಡಲೆ ಹಿಟ್ಟು - 1 ಟೀಸ್ಪೂನ್
- ಅಕ್ಕಿ ಹಿಟ್ಟು - 1 ಟೀಸ್ಪೂನ್
- ಕರಿಬೇವು - 2 ಎಲೆಗಳು
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಪುದೀನ ಎಲೆಗಳು - ಸ್ವಲ್ಪ
- ಈರುಳ್ಳಿ - 1
- ಧನಿಯಾ ಪುಡಿ - ಅರ್ಧ ಟೀಸ್ಪೂನ್
- ಗರಂ ಮಸಾಲ - ಕಾಲು ಟೀಸ್ಪೂನ್
- ಚಾಟ್ ಮಸಾಲ - ಕಾಲು ಟೀಸ್ಪೂನ್
- ಅರಿಶಿನ - ಕಾಲು ಟೀಸ್ಪೂನ್
ಇದನ್ನೂ ಓದಿ: ಸಂಕ್ರಾಂತಿ ವಿಶೇಷ: 'ಬೆಲ್ಲದ ಉದ್ದಿನಬೇಳೆ ಲಡ್ಡು' ಸಿದ್ಧಪಡಿಸೋದು ತುಂಬಾ ಸರಳ!
ಕಾರ್ನ್ ವಡೆ ತಯಾರಿಸುವುದು ಹೇಗೆ?:
- ಮೆಕ್ಕೆಜೋಳದ ಕಾಳುಗಳನ್ನು ನೆನೆಸಬೇಕು. ನೀವು ಬಳಸುವ ಕಾರ್ನ್ ಕಾಳುಗಳು ಗಟ್ಟಿಯಾಗಿದ್ದರೆ ನೀವು ಅವುಗಳನ್ನು ಒಂದೆರಡು ಗಂಟೆಗಳ ಕಾಲ ನೆನೆಸಿಡಬೇಕು. ಹಸಿಯಾದ ಮೆಕ್ಕೆಜೋಳದ ಕಾಳುಗಳನ್ನು ಬಳಸುತ್ತಿದ್ದರೆ, ಅವುಗಳನ್ನು 10 ನಿಮಿಷಗಳ ಕಾಲ ನೆನೆಸಿದರೆ ಸಾಕಾಗುತ್ತದೆ.
- ಈ ನಡುವೆ ನೀವು ಕರಿಬೇವು, ಪುದೀನ, ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿಯನ್ನು ನುಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕಾಗುತ್ತದೆ.
- ಕಾಳುಗಳನ್ನು ನೆನೆಸಿದ ಬಳಿಕ, ಅವುಗಳನ್ನು ನೀರಿಲ್ಲದೆ ಸೋಸಿ ಮಿಕ್ಸಿಂಗ್ ಜಾರ್ಗೆ ಹಾಕಿ. ಈಗ ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಎಸಳು, ಜೀರಿಗೆ ಮತ್ತು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಕಾಳು ಗಟ್ಟಿಯಾಗಿದ್ದರೆ, ನೀವು ಒಂದು ಟೀಸ್ಪೂನ್ ನೀರನ್ನು ಸೇರಿಸಬಹುದು. ಅವು ಮೃದುವಾಗಿದ್ದರೆ ನೀರಿನ ಅಗತ್ಯವಿಲ್ಲದೆ ರುಬ್ಬಿಕೊಳ್ಳಬೇಕಾಗುತ್ತದೆ.
- ಒಂದು ದೊಡ್ಡ ಬೌಲ್ನಲ್ಲಿ ರುಬ್ಬಿದ ಮಿಶ್ರಣವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟು ಸೇರಿಸಿ ಮಿಶ್ರಣ ಮಾಡಿ.
- ಬಳಿಕ ಕರಿಬೇವು, ಪುದೀನ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ. ನಂತರ ಕತ್ತರಿಸಿದ ಈರುಳ್ಳಿ, ಧನಿಯಾ ಪುಡಿ, ಗರಂ ಮಸಾಲ, ಚಾಟ್ ಮಸಾಲ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಇಷ್ಟೆಲ್ಲಾ ಹಿಟ್ಟು ಬೆರೆಸಿದ ಬಳಿಕ ಉಪ್ಪು ಮತ್ತು ಖಾರವನ್ನು ಚೆಕ್ ಮಾಡಿ. ಏನಾದರೂ ಕೊರತೆ ಕಂಡುಬಂದರೆ, ನೀವು ಆ್ಯಡ್ ಮಾಡಿಕೊಳ್ಳಬಹುದು.
- ಈಗ ಒಲೆ ಆನ್ ಮಾಡಿ ಅದರ ಮೇಲೆ ಕಡಾಯಿ ಇಡಿ, ಡೀಪ್ ಫ್ರೈ ಮಾಡಿಕೊಳ್ಳಲು ಬೇಕಾದಷ್ಟು ಎಣ್ಣೆ ಸುರಿದು ಬಿಸಿ ಮಾಡಿಕೊಳ್ಳಬೇಕಾಗುತ್ತದೆ.
- ಈಗ ನಿಮ್ಮ ಅಂಗೈಯಲ್ಲಿ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದುಕೊಂಡು, ಅದನ್ನು ರೌಂಡ್ ಆಕಾರದಲ್ಲಿ ವಡೆಗಳನ್ನು ರೆಡಿ ಮಾಡಿ ಬಿಸಿ ಎಣ್ಣೆಯಲ್ಲಿ ಬಿಡಬೇಕು.
- ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ವಡೆಗಳನ್ನು ಎರಡೂ ಬದಿಗಳು ಕೆಂಪಾಗುವವರೆಗೆ ಹುರಿದು ತಟ್ಟೆಯಲ್ಲಿ ತೆಗೆದುಕೊಳ್ಳಿ.
- ಬಿಸಿ ಬಿಸಿಯಾಗಿರುವಾಗಲೇ ವಡೆಗಳನ್ನು ಸೇವಿಸಿದರೆ ರುಚಿ ಅದ್ಭುತವಾಗಿರುತ್ತದೆ.
ಇದನ್ನೂ ಓದಿ: ಸಂಕ್ರಾಂತಿಗೆ ಭರ್ಜರಿ ರುಚಿಯ ಬಿಸಿ ಬಿಸಿ ಕಜ್ಜಾಯ: ಸಿದ್ಧಪಡಿಸೋದು ಅಷ್ಟೇ ಸುಲಭ