Coffin Cafe in Japan: ಒಂದೇ ಒಂದು ಅವಕಾಶವಿದ್ದರೆ ಸಾಕು ಹಲವು ಜನರು ತಮ್ಮ ಜೀವನವನ್ನು ಮರಳಿ ಪಡೆದುಕೊಳ್ಳಬಹುದು. ತಾವು ಮಾಡಿದ ತಪ್ಪುಗಳನ್ನು ಸರಿಪಡಿಸಬಹುದು. ಜೊತೆಗೆ ಹೊಸ ಜೀವನ ಮತ್ತೆ ಪ್ರಾರಂಭಿಸಬಹುದು. ನಿಜ ಜೀವನದಲ್ಲಿ ಇದರ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ, ನಾವು ಅಂತಹ ಅವಕಾಶವನ್ನು ನೀಡುತ್ತೇವೆ ಎಂದು ಕೆಫೆಯೊಂದು ತಿಳಿಸುತ್ತದೆ.
ಈ ಚಿಂತನೆಯನ್ನು ಜನ ಕೂಡ ತುಂಬಾ ಇಷ್ಟಪಟ್ಟಿದ್ದಾರೆ. ಅಲ್ಲಿಗೆ ಹೋಗಿ ಸ್ವಲ್ಪ ಹೊತ್ತು ಶವಪೆಟ್ಟಿಗೆಯಲ್ಲಿ ಮಲಗುವ ಮೂಲಕ ಹೊಸ ಬದುಕನ್ನು ಆರಂಭಿಸಬಹುದಾಗಿದೆ. ಇದಕ್ಕಾಗಿ ಜನರು ಈ ಕೆಫೆಯ ಎದುರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೆಫೆ ನೀಡಿದ ಅವಕಾಶವೇನು? ಶವಪೆಟ್ಟಿಗೆಯಲ್ಲಿ ಏಕೆ ಮಲಗಬೇಕು ಎಂಬುದರ ವಿವರಗಳನ್ನು ಇಲ್ಲಿ ತಿಳಿಯೋಣ.
ಕಾಫಿನ್ ಕೆಫೆ ವಿಶೇಷವೇನು?: ಜಪಾನ್‌ನಲ್ಲಿ ಅಂತಿಮ ವಿಧಿಗಳನ್ನು ನಡೆಸುವ ಸಂಸ್ಥೆಯಿದೆ. ಈ ಸಂಸ್ಥೆಗೆ 120 ವರ್ಷಗಳ ಇತಿಹಾಸವಿದ್ದು, ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಕಂಪನಿಯ ಆಡಳಿತವು ಇತ್ತೀಚೆಗೆ 'ಕಾಫಿನ್ ಕೆಫೆ' ಎಂಬ ನೂತನ ಕೆಫೆಯನ್ನು ಆರಂಭಿಸಿದೆ. ಈ ಕೆಫೆಗೆ ಚಹಾ, ಕಾಫಿ ಕುಡಿಯಲು ಬರುವವರಿಗಾಗಿಯೇ ಇಲ್ಲಿ ಕುರ್ಚಿ, ಮೇಜು, ಶವಪೆಟ್ಟಿಗೆಯನ್ನೂ ಸಿದ್ಧಪಡಿಸಲಾಗಿದೆ. ಮೂರು ಬಣ್ಣಗಳಲ್ಲಿ ಶವಪೆಟ್ಟಿಗೆಯನ್ನು ಅಲಂಕರ ಮಾಡಲಾಗಿದೆ. ಟೀ ಕುಡಿಯಲು ಹೋದವರು ಬಳಿಕ ಈ ಶವಪೆಟ್ಟಿಗೆಯಲ್ಲಿ ಮಲಗಬಹುದು. ಆರಂಭದಲ್ಲಿ ಶವಪೆಟ್ಟಿಗೆಯಲ್ಲಿ ಮಲಗಲು ಅಷ್ಟಾಗಿ ಸಾಹಸ ಮಾಡದ ಜನರು, ಸಂಸ್ಥೆಯ ಆಯೋಜಕರ ಉದ್ದೇಶವನ್ನು ಮೆಚ್ಚಿಕೊಂಡು ಒಬ್ಬೊಬ್ಬರಾಗಿ ಶವಪೆಟ್ಟಿಗೆಯಲ್ಲೇ ಮಲಗುತ್ತಿದ್ದಾರೆ.
ಸಂಸ್ಥೆಯವರು ಹೇಳುವುದೇನು?: ಆತ್ಮಹತ್ಯೆ ಮಾಡಿಕೊಂಡವರ ಅಂತಿಮ ಸಂಸ್ಕಾರ ಮಾಡಲು ಹೋದಾಗ ಸಂಬಂಧಿಕರೊಂದಿಗೆ ನಾವು ಮಾತನಾಡುತ್ತೇವೆ. ಸಾಯುವವರಲ್ಲಿ ಹಲವರು ಒತ್ತಡವನ್ನು ತಾಳಲಾರದೆ, ಅಥವಾ ಇನ್ನಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಾಸ್ತವವಾಗಿ ಅವೆಲ್ಲ ಸಮಸ್ಯೆಗಳು ತುಂಬಾ ಚಿಕ್ಕದಾಗಿವೆ. ತಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂಥವರ ಮನಸ್ಸನ್ನು ಹಗುರಗೊಳಿಸಲು ಮತ್ತು ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಈ ಶವಪೆಟ್ಟಿಗೆಯ ಚಿಂತನೆಯನ್ನು ಕಾರ್ಯರೂಪಕ್ಕೆ ತಂದಿದ್ದೇವೆ' ಎನ್ನುತ್ತಾರೆ ಸಂಸ್ಥೆಯ ಮುಖಂಡರು.
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬದುಕಿನಲ್ಲಿ ವಿಭಿನ್ನವಾದ ನೋವು ಇರುತ್ತದೆ. ಆರ್ಥಿಕ ಸಂಕಷ್ಟ ಕೆಲವರಿಗೆ, ಬಾಂಧವ್ಯದ ಸಂಕಟ ಇನ್ನು ಕೆಲವರಿಗೆ, ಅವಕಾಶಗಳ ಕೊರತೆಯ ಸಂಕಟ ಕೆಲವರಿಗೆ ಹಾಗೂ ಇನ್ನಳಿದವರಿಗೆ ವೈಫಲ್ಯದ ನೋವು ಕಾಡುತ್ತಲೇ ಇರುತ್ತದೆ. ಇವರಲ್ಲಿ ಹಲವರು ಕ್ಷಣಮಾತ್ರದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ. ಸಮಸ್ಯೆಗಳಿಂದ ಬಳಲುತ್ತಿರುವವರೆಲ್ಲರೂ ತಾವು ಜೋಡಿಸಿಟ್ಟ ಶವಪೆಟ್ಟಿಗೆಯಲ್ಲಿ ಮಲಗಬಹುದು ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸುತ್ತಾರೆ.
ತಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ಈ ಶವಪೆಟ್ಟಿಗೆಯಲ್ಲಿ ಬಿಟ್ಟು ಹೊಸ ಜೀವನ ಆರಂಭಿಸಲು ನಾವು ಅವರನ್ನು ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ. ಇಂದಿನ ಜಂಜಾಟದ ಬದುಕಿನಲ್ಲಿ ಒತ್ತಡದಿಂದ ಬಳಲುತ್ತಿರುವವರು ಜಗತ್ತಿನಾದ್ಯಂತ ಅನೇಕರಿದ್ದಾರೆ. ಅಂತಹವರಿಗೆಲ್ಲ ಈ ಶವಪೆಟ್ಟಿಗೆಯ ಚಿಂತನೆ ಇಷ್ಟವಾಗುತ್ತದೆ. ಆ ಕೆಫೆಯಲ್ಲಿ ಕಾಫಿ ಕುಡಿದು ಶವಪೆಟ್ಟಿಗೆಯಲ್ಲಿ ಮಲಗಿ ಮನಸ್ಸು ಹರಗು ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳುತ್ತಾರೆ. ಇದಕ್ಕೆ ಸಂಪೂರ್ಣ ಬೇಡಿಕೆ ಹೆಚ್ಚಾದ ಕಾರಣ ಸಂಘಟಕರು ಮೊದಲೇ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತಂದಿದ್ದಾರೆ.
ಕೆಫೆಯ ಆಡಳಿತದ ಕಾರ್ಯಕ್ಕೆ ಶ್ಲಾಘನೆ: ಈ ನೂತನ ಕಲ್ಪನೆಯಲ್ಲಿ ಭಾಗವಹಿಸಲು, ನೀವು ಮೊದಲು ಸ್ಲಾಟ್ ಅನ್ನು ಬುಕ್ ಮಾಡಬೇಕು. ಮೇಲಾಗಿ ಇದಕ್ಕಾಗಿ ₹2 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೂ ಕೂಡ ಜನ ಹಿಂದೆ ಸರಿಯುತ್ತಿಲ್ಲ. ಆತ್ಮಹತ್ಯೆಗಳ ಸಂಖ್ಯೆ ಕಡಿಮೆ ಮಾಡುವ ಸದುದ್ದೇಶದಿಂದ ಈ ಶವಪೆಟ್ಟಿಗೆ ಪರಿಕಲ್ಪನೆ ಪರಿಚಯಿಸಿದ ಕೆಫೆಯ ಆಡಳಿತದ ಕಾರ್ಯಕ್ಕೆ ಅನೇಕರು ಶ್ಲಾಘಿಸುತ್ತಾರೆ.
ಇದನ್ನೂ ಓದಿ: ದೈಹಿಕ, ಮಾನಸಿಕ ಯೋಗಕ್ಷೇಮದೊಂದಿಗೆ ಜೀವಿತಾವಧಿ ಹೆಚ್ಚಿಸಲು ICMR, NIN ನೀಡಿದ 25 ಆರೋಗ್ಯದ ಸೂತ್ರಗಳು