ಬೆಳಗಾವಿ: ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಓಡಾಡೋದು ಕಷ್ಟ ಆಗುತ್ತೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. "ನಾನು ಶಿಕಾರಿಪುರಕ್ಕೆ ಒಬ್ಬನೇ ಬರುತ್ತೇನೆ. ವಿಜಯೇಂದ್ರ ಮನೆ ಮುಂದಿನಿಂದಲೇ ಪ್ರವಾಸ ಶುರು ಮಾಡುತ್ತೇನೆ. ನಿನ್ನ ಸವಾಲು ಸ್ವೀಕರಿಸಿದ್ದೇನೆ. ನೀನೇ ದಿನಾಂಕ ನಿಗದಿ ಮಾಡು. ಬೆಂಬಲಿಗರು, ಗನ್ಮ್ಯಾನ್ ಬರುವುದಿಲ್ಲ. ನಾನು ಒಬ್ಬನೇ ಬರುತ್ತೇನೆ. ತಡಿ ನೋಡೋಣ" ಎಂದು ಸವಾಲು ಹಾಕಿದ್ದಾರೆ.
ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಗೆ ಚಾಲನೆ ನೀಡುವ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, "ನಿನ್ನ ಬೇಕಾದರೆ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದಂತೆ ಮಾಡುವ ಶಕ್ತಿ ನನಗಿದೆ. ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನಲ್ಲ. ವಿಜಯೇಂದ್ರ ಮೇಲೆ ನನಗೆ ಗೌರವ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಗೌರವ ಇದೆ" ಎಂದರು.
"ವಿಜಯೇಂದ್ರ ಬೆನ್ನು ಹತ್ರಿದರೆ ಯಡಿಯೂರಪ್ಪನವರೇ ಹಾಳಾಗುತ್ತೀರಿ. ಅವರನ್ನ ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನು ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೆ ಸೈಕಲ್ ಮೇಲೆ ಓಡಾಡಿದೀನಿ ಅಂತಾ ಹೇಳಬೇಡಿ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದ್ದೀರಿ. ಇದನ್ನು ನೀವು ಹೇಳಬೇಡಿ, ಅವಮಾನ ಆಗುತ್ತದೆ. ಪಕ್ಷ ಕಟ್ಟಿದ ಅದೇಷ್ಟೋ ನಾಯಕರು ಇನ್ನೂ ಒಂದು ಸೈಕಲ್ ತಗೊಂಡಿಲ್ಲ. ನೀವು ಎನೇನೋ ತಗೊಂಡಿದ್ದೀರಿ" ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬಿಜೆಪಿಗೆ ಬಂದಿದ್ದು ನಿಮ್ಮಪ್ಪನನ್ನು ಸಿಎಂ ಮಾಡಲು: "ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಅಂತೀಯಾ. ನಾನು ಬಂದಿದ್ದು ನಿಮ್ಮಪ್ಪನನ್ನು ಸಿಎಂ ಮಾಡಲು. ಅದೇ ಹರಾಮಿ ದುಡ್ಡಲ್ಲಿ ನೀನು ಓಡಾಡುತ್ತಿದೆಯಾ?. ನೀನು ಇನ್ನು ಬಚ್ಚಾ ಇದೀಯಾ. ಒಬ್ಬ ಬಹುಸಂಖ್ಯಾತ ಯತ್ನಾಳ್ ಇದ್ದಾರೆ ಅದಕ್ಕಾಗಿ ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ನೀನು ಸಣ್ಣ ಹುಡುಗ, ನಿನಗೆ ಅಧ್ಯಕ್ಷ ಸ್ಥಾನ ನೀಗುವುದಿಲ್ಲ. ಆದರೆ, ಹೈಕಮಾಂಡ್ ಮುಂದುವರೆಸಿದರೆ ಆಗಲಿ. ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ. ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು. ಸಣ್ಣ ಹುಡುಗ ಅದಿ ನೀನು ಏನೂ ಮಾತಾಡಬೇಕು ಗೊತ್ತಾಗಲ್ಲ" ಎಂದು ಹರಿಹಾಯ್ದರು.
"ನಮ್ಮಲ್ಲಿ ಜಗಳ ಇರುವುದು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಮಾತ್ರ. ಅಧ್ಯಕ್ಷ ಬದಲಾವಣೆ ಆದರೆ ಓಕೆ. ಅದು ಸಾಧ್ಯವಾಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ. ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ. ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ಅವರ ಬಗ್ಗೆ ಅಗೌರವದಿಂದ ಮಾತಾಡಿಲ್ಲ. ಅವರ ಮೇಲೆ ಗೌರವ ಇದೆ. ಆದರೆ ನೀನು ಸುಳ್ಳು ಹೇಳುವುದು ಬಿಡು" ಎಂದರು.
"ಗೂಂಡಾಗಿರಿ ಮಾಡುವ ಮಾತಾಡುವುದನ್ನು ಬಿಡು. ನಮ್ಮ ಮುಂದೆ ಡ್ಯಾಶ್ ಡ್ಯಾಶ್ ಅಂತವರನ್ನು ತಂದು ಯುದ್ದಕ್ಕೆ ನಿಲ್ಲಿಸಿದ್ದಾರೆ. ಪಕ್ಷ ಅಂತಾ ಬಂದಾಗ ಒಂದಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆ ಮಾಡುತ್ತೇವೆ. 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಜಾತಿ ಆಧಾರದ ಮೇಲೆ ನಾನು ರಾಜಕಾರಣ ಮಾಡಿಲ್ಲ. ಕ್ಷೇತ್ರದ ಜನರಿಗೆ ನನ್ನಿಂದ ಏನಾದರೂ ತಪ್ಪಾದರೆ, ಯಾರಿಗಾದರೂ ಏನಾದರೂ ಅಂದಿದ್ದರೆ ಕ್ಷಮಿಸಿ" ಎಂದು ಕೋರಿದರು.
ಸಿದ್ಧರಾಮಯ್ಯ ಅಹಿಂದ ನಾಯಕರಾಗಿ ಉಳಿದಿಲ್ಲ: "ಜಾತಿ ಗಣತಿ ಜಾರಿಯಾಗಬೇಕು. ನಮ್ಮ ಪಕ್ಷದ ನಿಲುವು ಏನೇ ಇರಲಿ, ನಾನು ವೈಯುಕ್ತಿಕವಾಗಿ ಜಾತಿ ಗಣತಿ ಪರವಾಗಿದ್ದೇನೆ. ಡಿಕೆಶಿ ಸೇರಿ ಅಲ್ಲಿರುವ ನಾಯಕರಿಗೆ ಹೆದರಿ ಜಾತಿಗಣತಿ ಜಾರಿಗೆ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ. ಸಿದ್ಧರಾಮಯ್ಯ ಬಗ್ಗೆ ಗೌರವ ಇದೆ. ಸಿದ್ಧರಾಮಯ್ಯ ಅಹಿಂದ ನಾಯಕರಾಗಿ ಉಳಿದಿಲ್ಲ. ಅಹಿಂದ ನಾಯಕರಾಗಿಯೇ ಉಳಿದು ಆಡಳಿತ ಮಾಡಿ ನಿವೃತ್ತಿಯಾಗಬೇಕು" ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಇದನ್ನೂ ಓದಿ: ಬಿಎಸ್ವೈ ವಿರುದ್ಧ ಮಾತನಾಡುವ ಭಿನ್ನಮತಿಯರನ್ನು ಪಕ್ಷದಿಂದಲೇ ಉಚ್ಛಾಟಿಸಲು ಮಾಜಿ ಶಾಸಕರ ಆಗ್ರಹ