ಟೆಲ್ ಅವಿವ್: ಜೋರ್ಡಾನ್ನಿಂದ ಗಡಿ ದಾಟಿ ಬರುತ್ತಿದ್ದ ಬಂದೂಕುಧಾರಿಯೊಬ್ಬ ಆಕ್ರಮಿತ ವೆಸ್ಟ್ ಬ್ಯಾಂಕ್ನ ಅಲೆನ್ಬಿ ಸೇತುವೆ ಗಡಿಯಲ್ಲಿ ಮೂವರು ಇಸ್ರೇಲಿ ನಾಗರಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾಲೆಸ್ಟೈನ್ ಇಸ್ಲಾಮಿಕ್ ಗುಂಪು ಹಮಾಸ್ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಜೋರ್ಡಾನ್ ಗಡಿಯಲ್ಲಿ ನಡೆದ ಈ ರೀತಿಯ ಮೊದಲ ದಾಳಿ ಇದಾಗಿದೆ.
ಜೋರ್ಡಾನ್ನಿಂದ ಸರಕುಗಳನ್ನು ಹೊತ್ತ ಟ್ರಕ್ಗಳು ವೆಸ್ಟ್ ಬ್ಯಾಂಕ್ನ ಗಡಿಗೆ ಪ್ರವೇಶಿಸುವ, ಇಸ್ರೇಲ್ ನಿಯಂತ್ರಣದಲ್ಲಿರುವ ವಾಣಿಜ್ಯ ಸರಕು ಸಾಗಾಟ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಕಿಂಗ್ ಹುಸೇನ್ ಸೇತುವೆ ಎಂದೂ ಕರೆಯಲ್ಪಡುವ ಈ ಕ್ರಾಸಿಂಗ್ ಡೆಡ್ ಸೀ ಸಮುದ್ರದ ಉತ್ತರಕ್ಕೆ ಅಮ್ಮನ್ ಮತ್ತು ಜೆರುಸಲೇಮ್ ಮಧ್ಯದಲ್ಲಿದೆ.
"ಭಯೋತ್ಪಾದಕನೊಬ್ಬ ಟ್ರಕ್ ಮೂಲಕ ಜೋರ್ಡಾನ್ನಿಂದ ಅಲೆನ್ಬಿ ಸೇತುವೆಯ ಪ್ರದೇಶಕ್ಕೆ ಆಗಮಿಸಿ, ಟ್ರಕ್ನಿಂದ ಹೊರಬಂದು ಸೇತುವೆಯ ಬಳಿ ಕಾರ್ಯನಿರ್ವಹಿಸುತ್ತಿದ್ದ ಇಸ್ರೇಲಿ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾನೆ. ಭಯೋತ್ಪಾದಕನನ್ನು ಭದ್ರತಾ ಪಡೆಗಳು ಸ್ಥಳದಲ್ಲೇ ಕೊಂದು ಹಾಕಿವೆ. ದಾಳಿಯ ಪರಿಣಾಮವಾಗಿ ಮೂವರು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದಾರೆ" ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಇಸ್ರೇಲ್ ಅನ್ನು ಜೋರ್ಡಾನ್ನೊಂದಿಗೆ ಸಂಪರ್ಕಿಸುವ ಎಲ್ಲಾ ಮೂರು ಭೂ ಗಡಿ ಕ್ರಾಸಿಂಗ್ಗಳನ್ನು ಮುಚ್ಚಲಾಗಿದೆ ಎಂದು ಈ ಮಾರ್ಗಗಳ ಮೇಲ್ವಿಚಾರಣೆ ನಡೆಸುವ ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಸರಕುಗಳನ್ನು ಇಳಿಸುವ ಪ್ರದೇಶದಲ್ಲಿ ಕನಿಷ್ಠ ಎರಡು ಡಜನ್ ಜೋರ್ಡಾನ್ ಟ್ರಕ್ ಚಾಲಕರನ್ನು ಇಸ್ರೇಲ್ ಮಿಲಿಟರಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ ಎಂದು ಜೋರ್ಡಾನ್ ಗಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಜೋರ್ಡಾನ್ 1994 ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ನಿಕಟ ಭದ್ರತಾ ಸಂಬಂಧಗಳನ್ನು ಹೊಂದಿವೆ. ಜೋರ್ಡಾನ್ನಿಂದ ಪ್ರತಿದಿನ ಡಜನ್ಗಟ್ಟಲೆ ಟ್ರಕ್ಗಳು ಇಸ್ರೇಲ್ಗೆ ಬರುತ್ತವೆ. ಈ ಟ್ರಕ್ಗಳು ಜೋರ್ಡಾನ್ ಮತ್ತು ಗಲ್ಫ್ನಿಂದ ವೆಸ್ಟ್ ಬ್ಯಾಂಕ್ ಮತ್ತು ಇಸ್ರೇಲಿ ಮಾರುಕಟ್ಟೆಗಳಿಗೆ ಅಗತ್ಯವಾದ ಸರಕುಗಳನ್ನು ಪೂರೈಸುತ್ತವೆ.
"ದುಷ್ಟ ಭಯೋತ್ಪಾದಕನೊಬ್ಬ ನಮ್ಮ ಮೂವರು ನಾಗರಿಕರನ್ನು ಕೊಂದಿದ್ದಾನೆ. ಇಸ್ರೇಲ್ ಪಾಲಿಗೆ ಇದೊಂದು ದುಃಖದ ದಿನ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ಅಧಿಕಾರಿ ಸಮಿ ಅಬು ಜುಹ್ರಿ ಈ ದಾಳಿಯನ್ನು ಶ್ಲಾಘಿಸಿದ್ದು, ಇದು ಗಾಜಾದಲ್ಲಿ ಇಸ್ರೇಲ್ ಆಕ್ರಮಣಕ್ಕೆ ಪ್ರತಿಕ್ರಿಯೆ ಎಂದಿದ್ದಾನೆ. ಇದೇ ರೀತಿಯ ಇನ್ನೂ ಅನೇಕ ದಾಳಿಗಳು ನಡೆಯಲಿವೆ ಎಂದು ಎಂದು ಆತ ಹೇಳಿದ್ದಾನೆ.