ಮುಂಬೈ: ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಅಂದರೆ 2024 - 25ರಿಂದ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ, ಅಂದರೆ 4ನೇ ತರಗತಿವರೆಗೆ ಶಾಲಾರಂಭದ ಸಮಯದಲ್ಲಿ ಬದಲಾವಣೆ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ
ಅದರ ಅನುಸಾರ ಬೆಳ್ಳಂಬೆಳ್ಳಗೆ ಆರಂಭವಾಗುತ್ತಿದ್ದ ಶಾಲೆಗಳು ಮುಂದಿನ ವರ್ಷದಿಂದ 9ಗಂಟೆಗೆ ಶುರುವಾಗಲಿದೆ. 10 ವರ್ಷದೊಳಗಿನ ಮಕ್ಕಳಿಗೆ ಬೆಳ್ಳಂಬೆಳ್ಳಗೆಯಿಂದಲೇ ಶಾಲೆಯನ್ನು ಆರಂಭಿಸುವ ಕುರಿತು ಕಳೆದೆರಡು ತಿಂಗಳ ಹಿಂದೆ ರಾಜ್ಯಪಾಲರಾದ ರಮೇಶ್ ಬೈಸ್ ಆಕ್ಷೇಪ ವ್ಯಕ್ತಪಡಿಸಿದ್ದರು.
ರಾಜ್ಯಪಾಲರ ಈ ಆಕ್ಷೇಪದ ಹಿನ್ನೆಲೆಯಲ್ಲಿ ತಜ್ಞರುಗಳು ಮತ್ತಿತರರು ಶಾಲಾ ಸಮಯ ಬದಲಾವಣೆ ಕುರಿತು ಪೋಷಕರು ಮತ್ತು ಶಿಕ್ಷಕರ ಸಮೀಕ್ಷೆ ನಡೆಸಿದರು. ಗ್ರಾಮೀಣ ಭಾಗ ಸೇರಿದಂತೆ ರಾಜ್ಯದೆಲ್ಲೆಡೆ 7ಗಂಟೆಗೆ ಆರಂಭವಾಗುತ್ತಿದ್ದರಿಂದ ಶಾಲಾ ಸಮಯ ಮರು ಪರಿಶೀಲಿಸುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅದರಂತೆ, ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ಸಾಲಿನಿಂದ 4ನೇ ತರಗತಿ ಕೆಳಗಿನ ತರಗತಿಗಳಿಗೆ ಬೆಳಗ್ಗೆ 9 ಮತ್ತು ಅದರ ಬಳಿಕ ಶಾಲೆ ಆರಂಭಿಸುವ ಕುರಿತು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಮಕ್ಕಳಿಗೆ ಬೆಳಗ್ಗೆ 7ಗಂಟೆಯಿಂದಲೇ ಶಾಲೆ ಆರಂಭ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವರಿಗೆ ಅಗತ್ಯವಾದ ನಿದ್ದೆ ಸಿಗುವುದಿಲ್ಲ. ಇದು ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳಗಿನ ಹೊತ್ತು ಬೇಗ ಎದ್ದು ತರಾತುರಿಯಲ್ಲಿ ಮಕ್ಕಳು ತಯಾರಾಗಬೇಕಾಗುತ್ತದೆ.
ಕಳೆದ ಡಿಸೆಂಬರ್ನಲ್ಲಿ ಕೂಡ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಶಾಲಾ ಸಮಯ ಬದಲಾವಣೆ ಕುರಿತು ಶಿಕ್ಷಣ ಅಧಿಕಾರಿಗಳಿಗೆ ಕರೆ ನೀಡಿದ್ದರು. ಆಧುನಿಕ ಕಾಲದ ಸಮಯದಲ್ಲಿ ಪ್ರತಿಯೊಬ್ಬರು ಮಲಗುವ ಸಮಯ ಬದಲಾಗಿದೆ. ಅದರಲ್ಲೂ ಮಕ್ಕಳು ಮಧ್ಯರಾತ್ರಿ ಮಾತ್ರ ಮಲಗುತ್ತಿದ್ದಾರೆ. ಶಾಲೆಗೆ ತೆರಳಲು ಅವರು ಬೇಗ ಏಳುತ್ತಿದ್ದು, ಅವರ ನಿದ್ದೆಯ ಕೋಟಾ ಕಡಿಮೆಯಾಗಿದೆ. ಶಾಲೆಗಳಲ್ಲಿ ಕಡಿಮೆ ಹೋಂ ವರ್ಕ್ ನೀಡಬೇಕು ಹಾಗೂ ಮಕ್ಕಳ ಶಿಕ್ಷಣವೂ ಹೆಚ್ಚು ಸಂತೋಷದಿಂದ ಕೂಡಿರುವ ವಾತಾವರಣವನ್ನು ಸೃಷ್ಟಿಸಬೇಕು. ಮಕ್ಕಳ ಸಮಗ್ರ ಅಭಿವೃದ್ಧಿಗೆ ಕ್ರೀಡಾ ಮತ್ತು ಕ್ರಿಯಾತ್ಮಕ ಚಟುವಟಿಕೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದ್ದರು.
ಇದನ್ನೂ ಓದಿ: ಶಾಲಾ ಸಮಯ ಬದಲಾವಣೆಗೆ ಆಡಳಿತ ಮಂಡಳಿ-ಪೋಷಕರ ವಿರೋಧ: ಈಗಿರುವ ಶಾಲಾ ಸಮಯ ಮುಂದುವರಿಕೆಗೆ ಮನವಿ