ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳ ಜೊತೆಗೆ ನವ ಪ್ರತಿಭಾನ್ವಿತರ ಸಿನಿಮಾಗಳು ಈ ವಾರ ಬಿಡುಗಡೆ ಆಗುವ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಈ ವಾರ ವಿಭಿನ್ನ ಕಥೆಗಳನ್ನೊಳಗೊಂಡಿರುವ 7 ಸಿನಿಮಾಗಳು ತೆರೆಗಪ್ಪಳಿಸಿವೆ.
ತೆರೆಕಂಡ ಸಿನಿಮಾಗಳಿವು: ನಟರಾಕ್ಷಸ ಖ್ಯಾತಿಯ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಜೀಬ್ರಾ, ಅನೀಶ್ ತೇಜಶ್ವರ್ ನಟನೆಯ ಆರಾಮ್ ಅರವಿಂದಸ್ವಾಮಿ, ಸುನೀಲ್ ಹಾಗೂ ರಾಕೇಶ್ ಅಡಿಗ ಅವರ ಮರ್ಯಾದೆ ಪ್ರಶ್ನೆ, ಧರ್ಮಕೀರ್ತಿ ರಾಜ್, ತಿಲಕ್ ಸೇರಿ ಬಹುತಾರಾಗಣದ ಟೆನಂಟ್, ಚೇತನ್ ಚಂದ್ರ ನಟಿಸಿರುವ ಪ್ರಭುತ್ವ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ಅಭಿನಯದ ಚೊಚ್ಚಲ ಚಿತ್ರ ಅಂಶು ಹಾಗೂ ತೆಲುಗಿನ ಲವ್ ರೆಡ್ಡಿ ಸಿನಿಮಾ ಸೇರಿದಂತೆ ಒಟ್ಟು 7 ಹೊಸ ಚಿತ್ರಗಳಿಂದು ರಾಜ್ಯಾದ್ಯಂತ ಬಿಡುಗಡೆ ಆಗಿವೆ.
ಹೀಗೆ ಒಂದೇ ದಿನ ಏಳು ಚಿತ್ರಗಳು ಬಿಡುಗಡೆ ಆದಾಗ ಯಾವ ಸಿನಿಮಾ ನೋಡೋದು, ಯಾವ ಸಿನಿಮಾ ಬಿಡೋದು ಎಂಬ ಗೊಂದಲ ಆಗೋದು ಸಹಜ. ಆದರೆ ಆಯಾ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಹೇಳೋದೇನಂದ್ರೆ ಎಲ್ಲಾ ಚಿತ್ರಕ್ಕೂ ಅದರದ್ದೇ ಆದ ಪ್ರೇಕ್ಷಕ ವರ್ಗ ಇರುತ್ತದೆ. ಹಾಗಾಗಿ, ಎಲ್ಲಾ ಸಿನಿಮಾಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಬರುತ್ತಾರೆಂಬ ನಂಬಿಕೆಯಲ್ಲಿಂದು ಏಳು ಚಿತ್ರಗಳು ತೆರೆಕಂಡಿವೆ.
ಆರಾಮ್ ಅರವಿಂದ ಸ್ವಾಮಿ: ಈ ಏಳು ಚಿತ್ರಗಳ ಪೈಕಿ ಕನ್ನಡದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ಅನೀಶ್ ತೇಜಶ್ವರ್ ಹಾಗೂ ಮಿಲನ ನಾಗರಾಜ್ ಅಭಿನಯದ 'ಆರಾಮ್ ಅರವಿಂದ ಸ್ವಾಮಿ'. ವಿಭಿನ್ನ ಪ್ರಮೋಷನ್ ಮಾಡಿರುವ ತಂಡ ಈ ಬಾರಿ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸದಲ್ಲಿದೆ. ಟ್ರೇಲರ್, ಹಾಡುಗಳಿಂದಲೇ ಭರವಸೆ ಹುಟ್ಟಿಸಿರೋ ಆರಾಮ್ ಅರವಿಂದ್ ಸ್ವಾಮಿ ನಿರೀಕ್ಷೆಯಂತೆ ಸಿನಿಪ್ರೇಮಿಗಳ ಮನ ಗೆಲ್ಲುತ್ತಾನಾ ಎಂಬುದು ಶೀಘ್ರವೇ ಗೊತ್ತಾಗಲಿದೆ.
ಮರ್ಯಾದೆ ಪ್ರಶ್ನೆ: ಶೀರ್ಷಿಕೆಯಿಂದಲೇ ಕನ್ನಡದಲ್ಲಿ ಕ್ರೇಜ್ ಹುಟ್ಟಿಸಿರೋ ಚಿತ್ರ 'ಮರ್ಯಾದೆ ಪ್ರಶ್ನೆ'. ರಾಕೇಶ್ ಅಡಿಗ, ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರ್ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರ ಟ್ರೇಲರ್ ಮೂಲಕ ಸದ್ದು ಮಾಡಿದೆ. ಹಾಡುಗಳು ಸಹ ಗಮನ ಸೆಳೆದಿವೆ. ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದು, ಶ್ವೇತಾ ಪ್ರಸಾದ್, ಆರ್ಜೆ ಪ್ರದೀಪ ನಿರ್ಮಾಣ ಮಾಡಿರುವ ಈ ಚಿತ್ರ ಮಧ್ಯಮ ವರ್ಗದ ರಿಯಲ್ ಕಹಾನಿಯನ್ನು ಒಳಗೊಂಡಿದೆ.
ಜೀಬ್ರಾ: ಈ ಮಧ್ಯೆ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಜೀಬ್ರಾ' ಕೂಡಾ ಇಂದೇ ರಿಲೀಸ್ ಆಗಿದೆ. ತೆಲುಗು ನಟ ಸತ್ಯದೇವ್ ಜೊತೆ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಅಮೃತಾ ಅಯ್ಯಂಗಾರ್ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಮಾಸ್ ಕಥೆ ಹೊಂದಿರುವ ಜೀಬ್ರಾ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದೆ.
ಪ್ರಭುತ್ವ: ಈ ಮೂರು ಸಿನಿಮಾಗಳ ಮಧ್ಯೆ ಗಮನ ಸೆಳೆಯುತ್ತಿರುವ ಚಿತ್ರ ಕುಂಭರಾಶಿ ಚೇತನ್ ಚಂದ್ರ ಅಭಿನಯದ ಪ್ರಭುತ್ವ ಸಿನಿಮಾ. ರಾಜಕೀಯದ ಕಥಾಹಂದರ ಇರುವ ಈ ಸಿನಿಮಾದಲ್ಲಿ ಚೇತನ್ ಚಂದ್ರ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮತದಾನದ ಮಹತ್ವ ತಿಳಿಸುವಂತಹ ಕಥೆ ಈ ಸಿನಿಮಾದಲ್ಲಿದೆ. ರವಿರಾಜ್ ಎಸ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಆದಿ ಲೋಕೇಶ್, ವಿಜಯ್ ಚೆಂಡೂರು, ಡ್ಯಾನಿ, ರಾಜೇಶ್ ನಟರಂಗ, ಅವಿನಾಶ್, ಶರತ್ ಲೋಹಿತಾಶ್ವ, ಪಾವನಾ ಸೇರಿದಂತೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜಕೀಯ, ಮತದಾನದ ಬಗ್ಗೆ ಪ್ರೇಕ್ಷಕರಿಗೆ ಸಂದೇಶ ನೀಡುವಂತಹ ಕಥೆ ಈ ಚಿತ್ರದಲ್ಲಿದೆ.
'ಟೆನಂಟ್': ಹಾಗೇ ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಧರ್ಮ ಕೀರ್ತಿರಾಜ್ ಮತ್ತು ಉಗ್ರಂ ಮಂಜು ಜೊತೆಗೆ ತಿಲಕ್ ಅಭಿನಯಿಸಿರುವ 'ಟೆನಂಟ್' ಸಿನಿಮಾ ತೆರೆಕಂಡಿದೆ. ಚಿತ್ರದಲ್ಲಿ ಸೋನು ಗೌಡ, ರಾಕೇಶ್ ಮಯ್ಯ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಲಾಕ್ಡೌನ್ ಸಂದರ್ಭದ ಕಥೆಯನ್ನು ಟೆನೆಂಟ್ ಹೇಳಲಿದೆ.
ಇದನ್ನೂ ಓದಿ: ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ಸೆಟ್ಟೇರಿತು ರಾಮ್ಚರಣ್ ಅಭಿನಯದ 'ಆರ್ಸಿ 16'
ಅಂಶು: ಇದರ ಜೊತೆಗೆ ಗಟ್ಟಿಮೇಳ ಹಾಗೂ ಅಣ್ಣಯ್ಯ ಸೀರಿಯಲ್ಗಳ ಮೂಲಕ ಫೇಮಸ್ ಆಗಿರುವ ನಿಶಾ ರವಿಕೃಷ್ಣನ್ ಮೊದಲ ಬಾರಿಗೆ 'ಅಂಶು' ಎಂಬ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದ್ದಾರೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಎಂ.ಸಿ. ಚನ್ನಕೇಶವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೀರಿಯಲ್ಗಳಲ್ಲಿ ಯಶಸ್ಸು ಪಡೆದ ನಿಶಾ ಅವರಿಗೆ ಬೆಳ್ಳಿತೆರೆಯಲ್ಲಿ ಎಷ್ಟರ ಮಟ್ಟಿಗೆ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
ಲವ್ ರೆಡ್ಡಿ: ದುನಿಯಾ ವಿಜಯ್ ಸಪೋರ್ಟ್ ಮಾಡಿರುವ ಲವ್ ರೆಡ್ಡಿ ಚಿತ್ರ ಕೂಡಾ ಬಿಡುಗಡೆ ಆಗಿದೆ. ಅಂಜನ್ ರಾಮಚಂದ್ರ, ಶ್ರಾವಣಿ ಅಭಿನಯದ ಲವ್ ರೆಡ್ಡಿ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು, ಸ್ಮರಣ್ ರೆಡ್ಡಿ ನಿರ್ದೇಶಿಸಿದ್ದಾರೆ. ಈಗಾಗ್ಲೇ ಹಲವು ವಿಶೇಷ ವಿಚಾರಗಳಿಂದ ಲವ್ ರೆಡ್ಡಿ ಸಿನಿಮಾ ಕನ್ನಡ ಸಿನಿಪ್ರಿಯರ ಎದೆ ತಟ್ಟಿದೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಹನುಮಂತುಗೆ ಬಟ್ಟೆ ಕಳುಹಿಸಿಕೊಟ್ಟ ಸುದೀಪ್: ಹೃದಯಸ್ಪರ್ಶಿ ಪತ್ರದಲ್ಲೇನಿದೆ?
ಒಟ್ಟಾರೆ ಈ ಏಳು ಸಿನಿಮಾಗಳು ಪ್ರೇಕ್ಷಕ ಪ್ರಭುಗಳ ಮನಸ್ಸನ್ನು ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.