ನಟ ಡಾ.ಶಿವರಾಜ್ಕುಮಾರ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಸಖತ್ ಬ್ಯುಸಿಯಾಗಿದ್ದಾರೆ. 'ಭೈರತಿ ರಣಗಲ್' ಹಾಗೂ '45' ಸಿನಿಮಾಗಳು ಬಿಡುಗಡೆಗೆ ರೆಡಿಯಾಗುತ್ತಿವೆ. ಈ ನಡುವೆ ಇದೀಗ 131ನೇ ಚಿತ್ರದಿಂದ ಹೊಸ ಅಪ್ಡೇಟ್ ಸಿಕ್ಕಿದೆ.
ಹ್ಯಾಟ್ರಿಕ್ ಹೀರೋನ ಹೊಸ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಸಜ್ಜಾಗಿದೆ. ಆದಷ್ಟು ಬೇಗ ಮುಹೂರ್ತ ಮುಗಿಸಿ ಚಿತ್ರೀಕರಣ ನಡೆಸಲು ಇಡೀ ಬಳಗ ಸಜ್ಜಾಗಿದೆ. ಅದಕ್ಕಾಗಿ ಇಡೀ ತಂಡ ಶಿವಣ್ಣನನ್ನು ಭೇಟಿಯಾಗಿದೆ. ಬಹುಬೇಡಿಕೆಯ ನಟನ ನಾಗವಾರ ನಿವಾಸಕ್ಕೆ ನಿರ್ದೇಶಕ ಕಾರ್ತಿಕ್ ಅದ್ವೈತ್, ನಿರ್ಮಾಪಕರಾದ ಎನ್.ಎಸ್.ರೆಡ್ಡಿ ಹಾಗೂ ಸುಧೀರ್, ಛಾಯಾಗ್ರಹಕ ಎ.ಜೆ.ಶೆಟ್ಟಿ, ಸಂಕಲನಕಾರ ದೀಪು ಎಸ್.ಕುಮಾರ್ ಭೇಟಿ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕಾರ್ತಿಕ್ ಅದ್ವೈತ್, ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ, ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಘೋಸ್ಟ್' ಖ್ಯಾತಿಯ ವಿ.ಎಂ.ಪ್ರಸನ್ನ ಹಾಗೂ 'ಸೀತಾರಾಮಂ' ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ.
ಇದನ್ನೂ ಓದಿ: ಸೆಂಚುರಿ ಸ್ಟಾರ್ ಇಂಟ್ರೊಡಕ್ಷನ್ ಟೀಸರ್ ಬೊಂಬಾಟ್.. ಐ ಆಮ್ ಕಮಿಂಗ್ ಅಂತಿದ್ದಾರೆ ಶಿವರಾಜ್ಕುಮಾರ್ - Shivarajkumar
ವಿಕ್ರಂ ವೇದ, ಆರ್ಡಿಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್. ಸಂಗೀತ ಒದಗಿಸಲಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್.ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ಅಡಿ ಎಸ್.ಎನ್.ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಕೃಷ್ಣಂ ಪ್ರಣಯ ಸಖಿಯ 'ದ್ವಾಪರ' ಸಾಂಗ್ಗೆ ಮೆಚ್ಚುಗೆ: ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಗಣಿ - Krishnam Pranaya Sakhi
ಇದೇ ಜುಲೈ 12ರಂದು ಶಿವರಾಜ್ಕುಮಾರ್ ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅಂದು 131ನೇ ಚಿತ್ರದ ಮೊದಲ ವಿಡಿಯೋ ತುಣುಕನ್ನು ಅನಾವರಣಗೊಳಿಸಲಾಗಿತ್ತು. 3 ನಿಮಿಷ 49 ಸೆಕೆಂಡ್ ಇರುವ ವಿಡಿಯೋದಲ್ಲಿ, ಪೊಲೀಸ್ ಸ್ಟೇಷನ್ನಲ್ಲಿ ರಗಡ್ ಡೈಲಾಗ್ ಮೂಲಕ ಹೀರೋನ ಇಂಟ್ರೊಡಕ್ಷನ್ ಆಗುತ್ತದೆ. ಅಚ್ಯುತ್ ಕುಮಾರ್ ನಾಯಕ ನಟನ ವರ್ಣನೆ ಮಾಡುವ ರೀತಿ ಅದ್ಭುತ. ಮೊದಲ ವಿಡಿಯೋದಲ್ಲೇ ಥ್ರಿಲ್ ಹೆಚ್ಚಿಸಿದ್ದ ಚಿತ್ರತಂಡದಿಂದ ಅಭಿಮಾನಿಗಳು ಹೆಚ್ಚಿನ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದಾರೆ.