ಹಾಸ್ಯ ನಟರು ನಾಯಕ ನಟರಾಗೋದು ಕನ್ನಡ ಚಿತ್ರರಂಗದಲ್ಲಿ ಹೊಸತೇನಲ್ಲ. ಇದೀಗ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಸೀರುಂಡೆ ರಘು ಅವರು 'ರಣಾಕ್ಷ' ಎಂಬ ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಹಿರಿತೆರೆ ಪ್ರವೇಶಿಸುತ್ತಿದ್ದಾರೆ. ದೇವರು ಮತ್ತು ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯೋ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ನ ಚಿತ್ರ "ರಣಾಕ್ಷ". ಕೆ.ರಾಘವ ಅವರ ನಿರ್ದೇಶನವಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ನಿರ್ದೇಶಕ ರಾಘವ ಮಾತನಾಡಿ, ಇದು ನನ್ನ ಎರಡನೇ ಚಿತ್ರ. ಕಲಾವಿದನಾಗಿ ಬಂದವನು ನಿರ್ದೇಶಕನಾಗಿದ್ದೇನೆ. ಪ್ರೊಡ್ಯೂಸರ್ಗೆ ಒನ್ ಲೈನ್ ಸ್ಟೋರಿ ಹೇಳಿದಾಗ ಕೂಡಲೇ ಒಪ್ಪಿದರು. ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಿದು. ದೇವರು ಮತ್ತು ದೆವ್ವ ಎರಡರ ನಡುವಿನ ಸಂಘರ್ಷವೇ ಚಿತ್ರದ ಕಾನ್ಸೆಪ್ಟ್. ಯಾವುದೇ ಮಂತ್ರ, ತಂತ್ರ , ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು, ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ರಘು ನನಗೆ ಬಹಳ ವರ್ಷದ ಗೆಳೆಯ. ನಿನ್ನನ್ನು ಹೀರೋ ಮಾಡುತ್ತೇನಂದಾಗ ಕಾಮಿಡಿ ಮಾಡಬೇಡಿ ಅಂದರು. ತುಂಬಾ ಶ್ರಮ ವಹಿಸಿ ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ತಿಳಿಸಿದರು.
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜನಪ್ರಿಯರಾದ ನಟ ಸೀರುಂಡೆ ರಘು ಮಾತನಾಡಿ, ನಾನು ಕೂಡಾ ಮಾಧ್ಯಮದಲ್ಲಿ ಕೆಲಸ ಮಾಡಿದವನು. ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದು, ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾಲ್ವರು ಸ್ನೇಹಿತರ ಜೊತೆ ಸಾಗುವ ಪಾತ್ರ. ಕೊನೆಯಲ್ಲಿ ವಿಷಯ ಏನೆಂದು ರಿವೀಲ್ ಆಗುತ್ತದೆ ಎಂದು ತಿಳಿಸಿದರು.
ನಾಯಕಿ ರಕ್ಷಾ ಮಾತನಾಡಿ, ನಾನು ಮುಗ್ಧ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ. ಇದು ನನ್ನ ಚೊಚ್ಚಲ ಚಿತ್ರ ಎಂದರು. ಈ ಸಂದರ್ಭದಲ್ಲಿ ನಿರ್ಮಾಪಕ ರಾಮು ಮಾತನಾಡಿ, 6 ರಿಂದ 80 ವರ್ಷದವರೂ ಕುಳಿತು ನೋಡುವಂಥ, ಹಳ್ಳಿ ಸೊಗಡಿನ ಕೌಟುಂಬಿಕ ಕಥಾನಕ ಇರೋ ಚಿತ್ರವಿದು. ಸಿನಿಮಾ ನೋಡಿ ನೀವೆಲ್ಲಾ ನಮ್ಮನ್ನು ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆಯಿದೆ. ಕುಚುಕು ಸ್ನೇಹಿತ ಉಮಾಮಹೇಶ್ವರ ನಮ್ಮ ಜೊತೆಗಿದ್ದಾರೆ. ಹಣ ಗಳಿಸೋ ಉದ್ದೇಶದಿಂದ ಈ ಸಿನಿಮಾ ಮಾಡಿಲ್ಲ. ರಘು ತುಂಬಾ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ. ಸಕಲೇಶಪುರದಲ್ಲಿ ಶೂಟ್ ಮಾಡುವಾಗ ತುಂಬಾ ಪೆಟ್ಟು ತಿಂದಿದ್ದಾರೆ. ಅಲ್ಲದೇ ಇಬ್ಬರು ಹೊಸ ಹುಡುಗಿಯರು ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ವಜ್ರಮುನಿ ಗೆಟಪ್ನಲ್ಲಿ ನಟ ಕೋಮಲ್: 'ಯಲಾಕುನ್ನಿ' ಟೀಸರ್ಗೆ ಮೆಚ್ಚುಗೆ - Yela Kunni Teaser
ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್ ಆಲಾಪ್ ಮಾತನಾಡಿ, ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಸಂಗೀತ ನೀಡುವುದು ನನಗೆ ಚಾಲೆಂಜಿಂಗ್ ಆಗಿತ್ತು. ಪ್ರತೀ ಹಾಡು ವಿಭಿನ್ನವಾಗಿ ಮೂಡಿ ಬಂದಿದೆ ಎಂದರು.
ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿವೆ. ಶೀಘ್ರದಲ್ಲೇ ರಣಾಕ್ಷ ಬೆಳ್ಳಿಪರದೆ ಮೇಲೆ ಮೂಡಿಬರಲಿದೆ.