ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, ಕರ್ವ" ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ "ಛೂ ಮಂತರ್" ಚಿತ್ರದ ಪ್ರೀ ರಿಲೀಸ್ ಈವೆಂಟ್ ಇತ್ತೀಚಿಗೆ ಅದ್ಧೂರಿಯಾಗಿ ನೆರವೇರಿತು.
ಕನಸಿನ ರಾಣಿ ಮಾಲಾಶ್ರೀ, ಡಾಲಿ ಧನಂಜಯ್, ಗುರುಕಿರಣ್, ರಿಷಿ, ಪ್ರಥಮ್, ಅಮೂಲ್ಯ, ಧೀರೇನ್ ರಾಮ್ಕುಮಾರ್, ತಿಲಕ್, ಮಾಲಾಶ್ರೀ ಪುತ್ರಿ ಆರಾಧನಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಪದಾಧಿಕಾರಿಗಳಾದ ಪ್ರವೀಣ್ ಕುಮಾರ್, ಚಿಂಗಾರಿ ಮಹದೇವ್, ನಿರ್ಮಾಪಕ ಕಿರಣ್ ಬರ್ತೂರು ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಆಗಮಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತು ಆರಂಭಿಸಿದ ನಿರ್ಮಾಪಕ ತರುಣ್ ಶಿವಪ್ಪ, ಸಂಕ್ರಾಂತಿ ಸಮೀಪದಲ್ಲಿ ಅಂದರೆ ಜನವರಿ 10 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಬೇರೆ ಭಾಷೆಗಳ ಚಿತ್ರಗಳೂ ಸಹ ಬಿಡುಗಡೆಯಾಗಲಿವೆ. ಹಾಗಾಗಿ, ನಮಗೆ ಸಾಕಷ್ಟು ಚಿತ್ರಮಂದಿರಗಳು ಸಿಗುತ್ತಿಲ್ಲ. ಮಂಡ್ಯದಂತಹ ಕನ್ನಡಿಗರೇ ಹೆಚ್ಚಿರುವ ಊರಿನಲ್ಲೂ ಚಿತ್ರಮಂದಿರ ಸಿಗದಿರುವುದು ತುಂಬಾ ಬೇಸರವಾಗಿದೆ. ಈ ಕುರಿತು ನಾವು ವಾಣಿಜ್ಯ ಮಂಡಳಿ ಮೊರೆ ಹೋಗಿದ್ದು, ನಮಗೆ ಸಾಕಷ್ಟು ಚಿತ್ರಮಂದಿರಗಳು ಸಿಗುವ ಭರವಸೆ ಇದೆ ಎಂದರು.

ಚಿತ್ರತಂಡದ ಸಹಕಾರದಿಂದ "ಛೂ ಮಂತರ್" ಚೆನ್ನಾಗಿ ಮೂಡಿಬಂದಿದೆ ಎಂದು ನಿರ್ದೇಶಕ ನವನೀತ್ ತಿಳಿಸಿದರು. ಇನ್ನು, ಈ ಚಿತ್ರದಲ್ಲಿ ನಾನೊಬ್ಬನೇ ನಾಯಕನಲ್ಲ. ಇದರಲ್ಲಿ ಅಭಿನಯಿಸಿರುವ ಎಲ್ಲರೂ ನಾಯಕರೇ. ಒಟ್ಟಾರೆ ಇಡೀ ಚಿತ್ರತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ನಮ್ಮ ಚಿತ್ರ ಎಲ್ಲರ ಮನ ತಲುಪಿದೆ. ಚಿತ್ರ ಗೆಲ್ಲುವ ಭರವಸೆ ಇದೆ. ಇಂದು ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಇಷ್ಟು ಜನ ಕಲಾವಿದರು ಬಂದಿರುವುದು ತುಂಬಾನೇ ಖುಷಿ ಕೊಟ್ಟಿದೆ. ಎಲ್ಲರಿಗೂ ಧನ್ಯವಾದ ಎಂದರು ನಾಯಕ ಶರಣ್.
ಇದನ್ನೂ ಓದಿ: ಬಜೆಟ್‌ಗಿಂತ 6 ಪಟ್ಟು ಲಾಭ, ಚಿತ್ರಮಂದಿರಗಳಲ್ಲಿ 200 ದಿನ ಓಡಿದ ಯಶ್ ಸಿನಿಮಾ; 2014ರ ಹಿಟ್ ಚಿತ್ರವಿದು
ಚಿತ್ರದಲ್ಲಿ ಅಭಿನಯಿಸಿರುವ ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ರಂಜನಿ ರಾಘವನ್, ನರಸಿಂಹ ಜಾಲಹಳ್ಳಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅವಿನಾಶ್ ಬಸತ್ಕೂರ್ ಸೇರಿದಂತೆ ಅನೇಕ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಗೋವಾದಲ್ಲಿ ಫ್ಯಾಮಿಲಿಯೊಂದಿಗೆ ಯಶ್ ಜನ್ಮದಿನಾಚರಣೆ: ಸೆಲೆಬ್ರೇಶನ್ ಫೋಟೋಗಳಿಲ್ಲಿವೆ
ಶರಣ್, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್, ರಂಜನಿ ರಾಘವನ್, ನರಸಿಂಹ ಜಾಲಹಳ್ಳಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ "ಛೂ ಮಂತರ್" ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.