ನಿರ್ದೇಶಕ ಯೋಗರಾಜ್ ಭಟ್, ಕನ್ನಡ ಚಿತ್ರರಂಗದ ವಿಕಟ ಕವಿ, ವಿಭಿನ್ನ ಸಿನಿಮಾಗಳ ಸೂತ್ರಧಾರ ಎಂದೇ ಜನಪ್ರಿಯರು. ಕರಟಕ ಧಮನಕ ಸಿನಿಮಾ ಬಳಿಕ ಭಟ್ರು ಮತ್ತೊಂದು ನವಿರಾದ ಪ್ರೇಮಕಥೆಯೊಂದಿಗೆ ನಿರ್ಮಾಪಕ ಇ. ಕೃಷ್ಣಪ್ಪ ಅವರ ಜೊತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ.
2006ರಲ್ಲಿ ಯೋಗರಾಜ್ ಭಟ್ ನಿರ್ದೇಶಿಸಿದ್ದ ಸ್ಯಾಂಡಲ್ವುಡ್ ಸೂಪರ್ ಹಿಟ್ ಸಿನಿಮಾ "ಮುಂಗಾರು ಮಳೆ". ಇಷ್ಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ. ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಹೆಸರು "ಮನದ ಕಡಲು". ಸುಮುಖ ಈ ಚಿತ್ರದ ನಾಯಕನಾಗಿ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಜಿ. ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು. ಬೆಂಗಳೂರಿನ ಅರಮನೆ ಆವರಣದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಮಾಧ್ಯಮ ಮಿತ್ರರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಮಾಧ್ಯಮಗೋಷ್ಟಿಗೆ ಆಹ್ವಾನಿಸಿತ್ತು. ಚಿತ್ರದ ಶೀರ್ಷಿಕೆಯನ್ನು ಸಹ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಜೊತೆಗೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.
ಮೊದಲು ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, ಮುಂಗಾರು ಮಳೆ ನಂತರ ಇ. ಕೃಷ್ಣಪ್ಪ ಅವರ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ನಿರ್ದೇಶಿಸುವ ಯೋಚನೆಯಿತ್ತು. ಆದರೆ ಅವರು ರಾಜಕೀಯದಲ್ಲಿ ಮತ್ತು ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದೆವು. ಕೋವಿಡ್ ನಂತರ ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ನಿರ್ಧಾರವಾಯಿತು. ಹೊಸಬರ ಜೊತೆಗೆ ಸಿನಿಮಾ ಮಾಡೋಣ ಎಂದು ಕೃಷ್ಣಪ್ಪ ಹೇಳಿದರು. ಹೊಸಬರ ಜೊತೆ ಸಿನಿಮಾ ಮಾಡೋದು ಸುಲಭವಲ್ಲ. ಈ ಚಿತ್ರಕ್ಕೆ ಹೀರೋ ಸಿಕ್ಕಿರಲಿಲ್ಲ. ಆಗಲೇ ಯಾವುದೋ ಕೆಲಸದ ವಿಷಯವಾಗಿ ಸುಮುಖ ಫೋನ್ ಮಾಡಿದ್ದರು. ಫೋಟೋ ಕಳುಹಿಸು ಎಂದೆ. ಅವರು ಎಲ್ಲರಿಗೂ ಇಷ್ಟವಾದ್ರು. ಜೊತೆಗೆ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಅದರಲ್ಲೂ ಕರ್ನಾಟಕದ 12 ಜಿಲ್ಲೆಗಳಲ್ಲಿ ಜಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ 15 ರೀತಿಯ ಅನುಮತಿ ಬೇಕು. ಅದೊಂದು ಯುದ್ಧ ಮಾಡಿದ ಅನುಭವ. ಬಿಸಿಲು, ರಣಮಳೆಯ ನಡುವೆ ಚಿತ್ರೀಕರಣ ಸುಲಭವಲ್ಲ. ಆದರೆ, ಬಹಳ ಚೆನ್ನಾಗಿ ಮೂಡಿ ಬಂದಿದೆ. ಇಲ್ಲಿ ರಂಗಾಯಣ ರಘು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ. ರಂಗಾಯಣ ರಘು ಸಹ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಶೇ. 95ರಷ್ಟು ಚಿತ್ರೀಕರಣ ಪುರ್ಣಗೊಂಡಿದೆ ಎಂದು ಮಾಹಿತಿ ಹಂಚಿಕೊಂಡರು.
ಕಥೆ ಚೆನ್ನಾಗಿರಬೇಕು. ಕನ್ನಡಿಗರು ಮೆಚ್ಚುವ ಹಾಗೆ ಮಾಡಬೇಕು. ಇದೊಂದು ಪ್ರಾಮಾಣಿಕ ಪ್ರಯತ್ನ. ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿದ್ದಾರೆ. ಅವರನ್ನು ಸರಿಯಾಗಿ ಗುರುತಿಸುವ ಕೆಲಸವಾಗುತ್ತಿಲ್ಲ. ಹೊಸಬರಿಗೆ ಒಳ್ಳೇದಾಗಬೇಕು. ಇದು ಸಹ "ಮುಂಗಾರು ಮಳೆ" ಮಟ್ಟಕ್ಕೆ ಹೋಗಬೇಕು. ಮಧ್ಯೆ ರಾಜಕಾರಣಕ್ಕೆ ಹೋಗಿದ್ದರಿಂದ ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಯೋಗರಾಜ್ ಭಟ್ ಸಹ ಬ್ಯುಸಿಯಾಗಿದ್ದರು. ಸದ್ಯ ಸಿನಿಮಾ ಸಾಧ್ಯವಾಗಿದೆ ಎಂದರು ನಿರ್ಮಾಪಕ ಇ.ಕೃಷ್ಣಪ್ಪ.
"ಮುಂಗಾರು ಮಳೆ" ಚಿತ್ರದಿಂದ ಇ.ಕೃಷ್ಣಪ್ಪ ಅವರ ನಿರ್ಮಾಣದ ಎಲ್ಲಾ ಚಿತ್ರಗಳಲ್ಲೂ ಸಹ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಯೋಗರಾಜ್ ಭಟ್ ಅವರ ಜೊತೆಗೆ 18 ವರ್ಷಗಳ ನಂತರ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ ಎನ್ನುತ್ತಾರೆ ಸಹ ನಿರ್ಮಾಪಕ ಗಂಗಾಧರ್.
ನಟ ಎಂದರೆ ಜಿಮ್‍ನಿಂದ ಬರಬೇಕು ಎಂಬಂತಾಗಿದೆ. ಅವರಿಗೆ ಭಾಷೆ-ಭಾವ ಗೊತ್ತಿರುವುದಿಲ್ಲ. ಸಿನಿಮಾಗೆ ಬೇಕಾಗಿದ್ದು ಅಭಿನಯ ಅನ್ನೋದನ್ನೇ ಅವರು ಮರೀತಾರೆ. ಆದರೆ, ಸುಮುಖನಿಗೆ ಅಂಥ ಯಾವ ರೋಗ ಇಲ್ಲ. ಇವನು ಓದಿಕೊಂಡಿದ್ದಾನೆ. ಸಿನಿಮಾ ಬಗ್ಗೆ ತಿಳಿದುಕೊಂಡಿದ್ದಾನೆ. ಚೆನ್ನಾಗಿ ನಟಿಸುತ್ತಾನೆ. ಭಟ್ರು ಮತ್ತು ಕೃಷ್ಣಪ್ಪ ಹೊಸಬರ ಜೊತೆಗೆ ಕೆಲಸ ಮಾಡಿದ್ದಾರೆ. ಶೀರ್ಷಿಕೆ ಬಹಳ ಚೆನ್ನಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಕನ್ನಡ ಸಿನಿಮಾ ಮಾಡೋಣ ಎಂದರಂತೆ ಕೃಷ್ಣಪ್ಪ. ಹೌದು, ಎಲ್ಲರೂ ಅಲ್ಲಿಗೆ ಹೋದರೆ ಇಲ್ಲಿ ಮನೆ ನೋಡಿಕೊಳ್ಳೋದು ಯಾರು ಎಂದರು ನಟ ರಂಗಾಯಣ ರಘು.
ಯೋಗರಾಜ್ ಭಟ್ ಬಹಳ ಮುತುವರ್ಜಿಯಿಂದ ನನ್ನ ಪಾತ್ರ ಸೃಷ್ಟಿಸಿದ್ದಾರೆ. ಈ ಚಿತ್ರದಲ್ಲಿ ನಾನು 100 ವರ್ಷದ ಮುದುಕನ ಪಾತ್ರ ಮಾಡಿದ್ದೇನೆ. ಆದರೆ, ಅವನದ್ದು 70 ವರ್ಷಗಳ ಚೈತನ್ಯ. ವಯಸ್ಸಾಯ್ತು ಅಂತ ತಲೆ ಆಡಿಸುವ ಹಾಗಿಲ್ಲ, ಮೈ ಬಗ್ಗಿಸುವ ಹಾಗಿಲ್ಲ. ಸಾತ್ವಿಕವಾಗಿ ತನ್ನ ವಯಸ್ಸನ್ನು ಅಭಿನಯದ ಮೂಲಕ ಹೇಳುವಂತಹ ಪಾತ್ರ. ಬಹಳ ಚೆನ್ನಾಗಿದೆ ಎಂದು ನಟ ದತ್ತಣ್ಣ ತಿಳಿಸಿದರು.
ಇದನ್ನೂ ಓದಿ: ಮತ್ತೆ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟ ರಿಯಲ್ ಸ್ಟಾರ್ ಉಪ್ಪಿ: ಡಿ.2ಕ್ಕೆ 'UI' ಚಿತ್ರದಿಂದ '𝐖𝐀𝐑𝐍𝐄𝐑'
ಈಗಿನ ಕಾಲದ ನವಯುವಕನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನವರು ಜೀವನದಲ್ಲಿ ಏನು ಮಾಡಬೇಕು? ಎಂಬ ಗೊಂದಲದಲ್ಲಿರುತ್ತಾರೆ. ಅದು ಈ ಚಿತ್ರದಲ್ಲಿದೆ. ಇದೊಂದು ದೊಡ್ಡ ಜವಾಬ್ದಾರಿ. ಯೋಗರಾಜ್ ಭಟ್ ಅವರ ಜೊತೆಗೆ ತುಂಬಾ ಕಲಿಯೋದಿದೆ. ಪ್ರತಿದಿನ ಅವರು ಹೊಸ ಆಲೋಚನೆಯೊಂದಿಗೆ ಬರುತ್ತಾರೆ. ಹೊಸ ಪ್ರಯೋಗ ಮಾಡುತ್ತಾರೆ ಎಂದು ನಾಯಕ ಸುಮುಖ ಹೇಳಿದರು.
ಇದನ್ನೂ ಓದಿ: 'ಬಚ್ಚನ್' ಸರ್ನೇಮ್ ಕೈಬಿಟ್ಟ ಐಶ್ವರ್ಯಾ ರೈ! ಐಶ್-ಅಭಿ ಡಿವೋರ್ಸ್ ರೂಮರ್ಸ್ ಉಲ್ಭಣ
ನಾಯಕಿಯರಾದ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ, ಪ್ರತಾಪ್ ರಾವ್ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. 18 ವರ್ಷಗಳ ಹಿಂದೆ ಇ.ಕೆ. ಎಂಟರ್ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಮುಂಗಾರು ಮಳೆ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇಷ್ಟು ವರ್ಷಗಳ ನಂತರ ಮುಂಗಾರು ಮಳೆ ಹಿಟ್ ಕಾಂಬಿನೇಶನ್ ಮನದ ಕಡಲು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮುಂಗಾರು ಮಳೆ ಬಿಡುಗಡೆ ಆದ ತಿಂಗಳಿನಲ್ಲಿ ಈ ಮನದ ಕಡಲು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.