ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಾದ ಮಜಾಭಾರತ ಮತ್ತು ಬಿಗ್ ಬಾಸ್ ಮೂಲಕ ಹೆಸರುವಾಸಿಯಾದ ಮಂಜು ಪಾವಗಡ ಅವರು ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಅಭಿಮಾನಿಗಳು ನವದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ದಾಂಪತ್ಯ ಜಿವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಮಂಜು ಪಾವಗಡ ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡಿದ್ದರು. ಸುದೀರ್ಘ 120 ದಿನಗಳ ಕಾಲ ಬಿಗ್ ಹೌಸ್ನಲ್ಲಿದ್ದ ಮಂಜು ಆ ಸೀಸನ್ನ ವಿಜೇತರಾಗಿ ಹೊರಹೊಮ್ಮಿದರು. ಬೈಕರ್ ಕೆ.ಪಿ ಅರವಿಂದ್ ರನ್ನರ್ ಅಪ್ ಆದರೆ, ನಟಿ ದಿವ್ಯಾ ಉರುಡುಗ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಈ ಹಿಂದೆ ಕಿರುತೆರೆ ಕಾರ್ಯಗಳಲ್ಲಿ ಕೆಲಸ ಮಾಡಿದ್ದ ಮಂಜು ಅವರು ಬಿಗ್ ಬಾಸ್ ಗೆಲ್ಲಬೇಕೆಂಬ ಉದ್ದೇಶದೊಂದಿಗೆ ಬಂದು, ವಿಜೇತರಾಗಿ ಹೊರಹೊಮ್ಮಿದರು. ಇದೀಗ ವೈವಾಹಿಕ ಜೀವನ ಶುರು ಮಾಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ವಿಡಿಯೋಗಳು ವೈರಲ್ ಆಗುತ್ತಿವೆ.
ನಟಿ ಶುಭಾ ಪೂಂಜಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು, ''ನನ್ನ ಚಂಪು (ಮಂಜು ಪಾವಗಡ) ಕೊನೆಗೂ ಮದುವೆಯಾದರು. ಈ ಸ್ನೇಹ ಕೇವಲ 3 ವರ್ಷಗಳದ್ದು. ಆದ್ರೆ ನೀವು ನನ್ನ ಬಾಲ್ಯದ ಗೆಳೆಯ ಎಂಬಂತಾಗಿದೆ. ಏಕೆಂದರೆ, ನಾನು ನಿಮ್ಮೊಂದಿಗೆ ಹಂಚಿಕೊಂಡಿರುವ ಭಾಂದವ್ಯ ಅಂಥದ್ದು. ಕಳೆದ ಮೂರು ವರ್ಷಗಳಿಂದ ನನ್ನ ಉತ್ತಮ ಮತ್ತು ಕೆಟ್ಟ ಕ್ಷಣಗಳಲ್ಲಿ ನೀವು ನನ್ನೊಂದಿಗೆ ನಿಂತಿದ್ದೀರಿ. ನೀವಿಂದು ಮದುವೆಯಾಗಿದ್ದೀರಿ, ಜೀವನಕ್ಕೆ ಸಂಗಾತಿಯನ್ನು ಪಡೆದಿದ್ಧೀರಿ. ಅತ್ಯುತ್ತಮ ವೈವಾಹಿಕ ಜೀವನವನ್ನು ಹೊಂದಬೇಕೆಂಬುದು ನನ್ನ ಹಾರೈಕೆ. ನೀವು ಅತ್ಯುತ್ತಮರು. ನಿಮ್ಮೊಂದಿಗೆ, ನಿಮ್ಮ ಜೀವನದ ಪ್ರತೀ ತಿರುವಿನಲ್ಲಿಯೂ ಇನ್ನುಮುಂದೆ ನಿಮ್ಮ ಬಾಳ ಸಂಗಾತಿ ಇರುತ್ತಾರೆ. ನೀವು ಮದುವೆಯಾಗಿದ್ದೀರಿ. ಆದ್ರಿನ್ನೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ
ಮಜಾಭಾರತ, ಗಿಚ್ಚಿ ಗಿಲಿಗಿಲಿ, ಬಿಗ್ ಬಾಸ್ನಂತಹ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಹೆಸರು ಸಂಪಾದಿಸಿರುವ ಮಂಜು ಪಾವಗಡ ಇತ್ತೀಚೆಗಷ್ಟೇ ನಂದಿನಿ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಪಾವಗಡದಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ಜರುಗಿದೆ.
ಇದನ್ನೂ ಓದಿ: 'ಡಾಲಿ ಧನಂಜಯ್ ಕನ್ನಡದಲ್ಲಿ ಅದ್ಭುತ ನಟ, ತೆಲುಗಿನಲ್ಲಿ ಸ್ಟಾರ್ ಆಗ್ತಾರೆ': ಚಿರಂಜೀವಿ
ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಹೊರ ಹೊಮ್ಮಿದ್ದ ಮಂಜು ಅವರು ಟ್ರೋಫಿ ಸಹಿತ 53 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದರು. ಮಜಾ ಭಾರತ ಶೋನಿಂದ ಗುರುತಿಸಿಕೊಂಡ ಅವರು ತಮ್ಮ ಈ ಅಭೂತಪೂರ್ವ ಗೆಲುವನ್ನು ಮಜಾ ಭಾರತ ತಂಡಕ್ಕೆ ಅರ್ಪಿಸಿದ್ದರು.