ಅಭಿಮನ್ಯು ಕಾಶಿನಾಥ್ ಅಭಿನಯದ 'ಎಲ್ಲಿಗೆ ಪಯಣ ಯಾವುದೋ ದಾರಿ' ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಂತೋಷದಲ್ಲಿ ಚಿತ್ರತಂಡದಲ್ಲಿದೆ. ಇದೇ ಹೊತ್ತಿನಲ್ಲಿ ಅಭಿಮನ್ಯು ಕಾಶಿನಾಥ್ ಚಿತ್ರತಂಡದೊಂದಿಗೆ ಅವಧೂತ ಅರ್ಜುನ್ ಗುರೂಜಿಯನ್ನು ಭೇಟಿಯಾಗಿದ್ದಾರೆ. ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಅರ್ಜುನ್ ಗುರೂಜಿ ಅಭಿಮನ್ಯು ಸೇರಿದಂತೆ ಒಂದಿಡೀ ಚಿತ್ರತಂಡಕ್ಕೆ ಒಳಿತಾಗಲಿ, ಈ ಸಿನಿಮಾ ಇನ್ನಷ್ಟು ಯಶ ಕಾಣಲೆಂದು ಆಶೀರ್ವಾದ ಮಾಡಿದ್ದಾರೆ.
ಮೈಸೂರಿನಲ್ಲಿರುವ ಅವಧೂತ ಅರ್ಜುನ್ ಗುರೂಜಿ ಅವರ ನಿವಾಸಕ್ಕೆ ಚಿತ್ರತಂಡದೊಂದಿಗೆ ತೆರಳಿದ್ದ ಅಭಿಮನ್ಯು ಕಾಶಿನಾಥ್, ತಮ್ಮ ತಂದೆ ಕಾಶಿನಾಥ್ ಅವರ ಹೆಸರು ಅಜರಾಮರವಾಗಲೆಂದು ಬೇಡಿಕೊಂಡಿದ್ದಾರೆ. ನಂತರ ಆಶೀರ್ವಚನ ನೀಡಿದ ಅವಧೂತ ಅರ್ಜುನ್ ಗುರೂಜಿ, ಈ ಸಿನಿಮಾ ಸಂಪೂರ್ಣವಾಗಿ ಯಶಸ್ಸುಗಳಿಸಲೆಂದು ಹಾರೈಸುತ್ತಲೇ, ಯುವ ನಟ ಅಭಿಮನ್ಯು ಕಾಶಿನಾಥ್ ತಮ್ಮ ಸಿನಿಮಾಗಳ ಮೂಲಕ ಯುವ ಜನತೆಗೆ ಉತ್ತಮ ಸಂದೇಶಗಳನ್ನು ದಾಟಿಸುವಂತಾಗಲೆಂದೂ ಹರಸಿದ್ದಾರೆ.
ಈ ಸಂದರ್ಭದಲ್ಲಿ ನಾಯಕ ನಟ ಅಭಿಮನ್ಯು ಕಾಶಿನಾಥ್ ಅವರೊಂದಿಗೆ ನಾಯಕಿ ಸ್ಫೂರ್ತಿ ಉಡಿಮನೆ, ನಿರ್ದೇಶಕ ಕಿರಣ್ ಎಸ್. ಸೂರ್ಯ ಮತ್ತು ಚಿತ್ರತಂಡ ಭಾಗಿಯಾಗಿತ್ತು. ಸೂಕ್ಷ್ಮ ಕಥಾನಕವನ್ನೊಳಗೊಂಡಿರುವ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದೆ. ನಾಯಕ ಅಭಿಮನ್ಯು ಕಾಶಿನಾಥ್ ಈ ಸಿನಿಮಾವನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡದೊಂದಿಗೆ ಸಕ್ರಿಯರಾಗಿದ್ದಾರೆ. ಇದರ ನಡುವಲ್ಲಿಯೇ ಅವಧೂತ ಅರ್ಜುನ್ ಗುರೂಜಿಯನ್ನು ಭೇಟಿಯಾಗುವ ಮೂಲಕ ಆಧ್ಯಾತ್ಮಿಕ ಅನುಭೂತಿಯೊಂದಿಗೆ ಮತ್ತಷ್ಟು ಹುರುಪು ತುಂಬಿಕೊಂಡಿದ್ದಾರೆ.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ .ಎಸ್. ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ಗೆ ಮಧ್ಯಂತರ ಜಾಮೀನು