ನವದೆಹಲಿ: ಆಹಾರ ವಿತರಣಾ ಪ್ಲಾಟ್ಫಾರ್ಮ್ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಮತ್ತೊಮ್ಮೆ ತಮ್ಮ ಪ್ಲಾಟ್ಫಾರ್ಮ್ ಶುಲ್ಕವನ್ನು ಹೆಚ್ಚಿಸಿವೆ. ಈ ಹಿಂದೆ ಪ್ರತಿ ಆರ್ಡರ್ಗೆ 5 ರೂ. ಇದ್ದ ಪ್ಲಾಟ್ಫಾರ್ಮ್ ಫೀಯನ್ನು ಈಗ 6 ರೂ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತ ದೆಹಲಿ ಮತ್ತು ಬೆಂಗಳೂರಿನಲ್ಲಿ ವಿತರಣಾ ಶುಲ್ಕ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ರೆಸ್ಟೋರೆಂಟ್ ಶುಲ್ಕಗಳು ಮತ್ತು ನಿರ್ವಹಣಾ ಶುಲ್ಕಗಳನ್ನು ಹೊರತು ಪಡಿಸಿ ಪ್ಲಾಟ್ಫಾರ್ಮ್ ಫೀಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತಿದೆ.
ಎರಡೂ ಪ್ಲಾಟ್ ಫಾರ್ಮ್ಗಳಲ್ಲಿನ ಲಾಯಲ್ಟಿ ಯೋಜನೆಗೆ ಸೇರಿದ ಗ್ರಾಹಕರನ್ನು ಸೇರಿಸಿ ಎಲ್ಲ ಗ್ರಾಹಕರಿಗೆ ಹಾಗೂ ಎಲ್ಲಾ ರೀತಿಯ ಆರ್ಡರ್ಗಳಿಗೆ ಪ್ಲಾಟ್ಫಾರ್ಮ್ ಫೀ ಅನ್ವಯವಾಗುತ್ತದೆ. ಇದು ಕಂಪನಿಗಳ ಆದಾಯಕ್ಕೆ ಮತ್ತು ವೆಚ್ಚ ನಿರ್ವಹಣೆಗೆ ನೇರವಾಗಿ ಕೊಡುಗೆ ನೀಡುತ್ತದೆ.
ಪ್ರತಿ ಆರ್ಡರ್ಗೆ 1 ರೂಪಾಯಿ ಹೆಚ್ಚಳವು ಗ್ರಾಹಕರಿಗೆ ಸಣ್ಣದಾಗಿ ತೋರಿದರೂ, ಸುಮಾರು 2.2 ರಿಂದ 2.5 ಮಿಲಿಯನ್ ದೈನಂದಿನ ಆರ್ಡರ್ಗಳನ್ನು ನಿರ್ವಹಿಸುವ ಜೊಮಾಟೊಗೆ, ಇದು ಹೆಚ್ಚುವರಿಯಾಗಿ ದೈನಂದಿನ 25 ಲಕ್ಷ ರೂ. ಆದಾಯ ತಂದು ಕೊಡಲಿದೆ. ಆಹಾರ ವಿತರಣಾ ಕಂಪನಿಗಳು ಈ ಪ್ಲಾಟ್ಫಾರ್ಮ್ ಶುಲ್ಕ ಏರಿಕೆಯ ಮೂಲಕ ಪ್ರತಿದಿನ 1.25 ರಿಂದ 1.5 ಕೋಟಿ ರೂಪಾಯಿ ಲಾಭ ಗಳಿಸುವ ನಿರೀಕ್ಷೆ ಇಟ್ಟುಕೊಂಡಿವೆ.
ಸ್ವಿಗ್ಗಿ ಮೊದಲ ಬಾರಿಗೆ ಏಪ್ರಿಲ್ 2023 ರಲ್ಲಿ 2 ರೂ.ಗಳ ಪ್ಲಾಟ್ಫಾರ್ಮ್ ಶುಲ್ಕವನ್ನು ಪರಿಚಯಿಸಿತ್ತು. ಅದೇ ವರ್ಷದ ಆಗಸ್ಟ್ನಲ್ಲಿ ಜೊಮಾಟೊ ಕೂಡ ಶುಲ್ಕ ವಿಧಿಸಲಾರಂಭಿಸಿತು. ಅಂದಿನಿಂದ, ಎರಡೂ ಕಂಪನಿಗಳು ಈ ಶುಲ್ಕವನ್ನು ಹೆಚ್ಚಿಸುತ್ತಲೇ ಬಂದಿವೆ. ಶುಲ್ಕ ಹೆಚ್ಚಿಸಿದರೂ ಗ್ರಾಹಕರು ಆರ್ಡರ್ ಮಾಡುವುದನ್ನು ಕಡಿಮೆ ಮಾಡಿಲ್ಲ ಎಂಬುದನ್ನು ಎರಡೂ ಕಂಪನಿಗಳು ಕಂಡುಕೊಂಡಿವೆ.
ಅತ್ಯಂತ ದಟ್ಟಣೆಯ ಸಮಯದಲ್ಲಿ, ಜೊಮಾಟೊ ತನ್ನ ಪ್ಲಾಟ್ ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್ಗೆ 9 ರೂ.ಗೆ ಹೆಚ್ಚಿಸಿದರೆ, ಸ್ವಿಗ್ಗಿ ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಇತರ ನಗರಗಳಲ್ಲಿನ ನಿರ್ದಿಷ್ಟ ಗ್ರಾಹಕರಿಗೆ 10 ರೂ. ಪ್ಲಾಟ್ಫಾರ್ಮ್ ವಿಧಿಸುತ್ತಿದೆ. ಪ್ಲಾಟ್ಫಾರ್ಮ್ ಶುಲ್ಕಗಳನ್ನು ಹೆಚ್ಚಿಸುವುದಿಲ್ಲ ಎಂದು ಈ ಹಿಂದೆ ಸ್ವಿಗ್ಗಿ ಹೇಳಿತ್ತು. ಆದರೆ ಗ್ರಾಹಕರಿಂದ ತೀವ್ರ ಪ್ರತಿರೋಧ ಬರುವವರೆಗೂ ಎರಡೂ ಕಂಪನಿಗಳು ಪ್ಲಾಟ್ಫಾರ್ಮ್ ಫೀಯನ್ನು ಹೆಚ್ಚಿಸುತ್ತಲೇ ಹೋಗಲಿವೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಸ್ವಿಗ್ಗಿ ಮತ್ತು ಜೊಮಾಟೊ ತಮ್ಮ ಆಹಾರ ವಿತರಣಾ ಸೇವೆಗಳಿಗೆ ಪ್ರತ್ಯೇಕವಾಗಿ ಪ್ಲಾಟ್ ಫಾರ್ಮ್ ಶುಲ್ಕವನ್ನು ಜಾರಿಗೆ ತಂದಿದ್ದರೂ, ಈ ಶುಲ್ಕವನ್ನು ತಮ್ಮ ತ್ವರಿತ ವಾಣಿಜ್ಯ ಉದ್ಯಮಗಳಾದ ಇನ್ಸ್ಟಾಮಾರ್ಟ್ ಮತ್ತು ಬ್ಲಿಂಕಿಟ್ಗೆ ವಿಸ್ತರಿಸಿಲ್ಲ.
ಇದನ್ನೂ ಓದಿ : 21 ಸಾವಿರ ಕೋಟಿ ರೂ.ಗೆ ತಲುಪಿದ ಭಾರತದ ಯುದ್ಧ ಶಸ್ತ್ರಾಸ್ತ್ರ ರಫ್ತು: 10 ವರ್ಷಗಳಲ್ಲಿ 30 ಪಟ್ಟು ಹೆಚ್ಚಳ - India Defence Exports