ಮುಂಬೈ : ಗುರುವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಸತತ ಎರಡನೇ ದಿನ ಇಳಿಕೆಯೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 109 ಪಾಯಿಂಟ್ಸ್ ಅಥವಾ ಶೇಕಡಾ 0.14 ರಷ್ಟು ಕುಸಿದು 80,040 ರಲ್ಲಿ ಕೊನೆಗೊಂಡಿತು. ನಿಫ್ಟಿ 50 ಕೂಡ 7 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಕುಸಿದು 24,406 ರಲ್ಲಿ ಕೊನೆಗೊಂಡಿತು. ಬಜೆಟ್ ಮಂಡನೆಯಾಗಿ ಎರಡು ದಿನ ಕಳೆದರೂ ಷೇರು ಮಾರುಕಟ್ಟೆಯಲ್ಲಿ ಖರೀದಿಯ ಉತ್ಸಾಹ ಇನ್ನೂ ಕಂಡು ಬಂದಿಲ್ಲ.
ಬೆಂಚ್ ಮಾರ್ಕ್ ಸೂಚ್ಯಂಕಗಳಲ್ಲಿ ಆಕ್ಸಿಸ್ ಬ್ಯಾಂಕ್ (ಶೇಕಡಾ 5.2 ರಷ್ಟು ಕುಸಿತ) ಅತಿಹೆಚ್ಚು ನಷ್ಟ ಕಂಡರೆ, ನೆಸ್ಲೆ ಇಂಡಿಯಾ, ಟೈಟಾನ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಐಟಿಸಿ ನಂತರದ ಸ್ಥಾನಗಳಲ್ಲಿವೆ.
ವಿಶಾಲ ಮಾರುಕಟ್ಟೆಗಳು ಸಹ ದಿನವಿಡೀ ಅಸ್ಥಿರವಾಗಿದ್ದು ಲಾಭ ಮತ್ತು ನಷ್ಟಗಳ ನಡುವೆ ಚಲಿಸುತ್ತಿದ್ದವು. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.2 ಮತ್ತು ಶೇಕಡಾ 0.14 ರಷ್ಟು ಕುಸಿದವು. ವಲಯಗಳ ಪೈಕಿ, ನಿಫ್ಟಿ ಮೆಟಲ್ ಸೂಚ್ಯಂಕ ಶೇಕಡಾ 1 ಕ್ಕಿಂತ ಹೆಚ್ಚು, ನಿಫ್ಟಿ ಖಾಸಗಿ ಬ್ಯಾಂಕ್ ಶೇಕಡಾ 0.9 ಮತ್ತು ನಿಫ್ಟಿ ಬ್ಯಾಂಕ್ ಶೇಕಡಾ 0.83 ರಷ್ಟು ಕುಸಿದಿವೆ. ಇದಕ್ಕೆ ವಿರುದ್ಧವಾಗಿ, ನಿಫ್ಟಿ ಆಟೋ ಸೂಚ್ಯಂಕ ಶೇಕಡಾ 1 ರಷ್ಟು ಏರಿಕೆಯಾಗಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕನ್ ಕರೆನ್ಸಿಗೆ ಬೇಡಿಕೆ ಹೆಚ್ಚಳವಾಗಿದ್ದು ಮತ್ತು ಗಮನಾರ್ಹ ವಿದೇಶಿ ನಿಧಿಯ ಹೊರಹರಿವಿನಿಂದಾಗಿ ರೂಪಾಯಿ ಗುರುವಾರ ಯುಎಸ್ ಡಾಲರ್ ವಿರುದ್ಧ 1 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 83.72 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 83.72 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ಡಾಲರ್ ವಿರುದ್ಧ 83.66 ರ ಗರಿಷ್ಠ ಮತ್ತು 83.72 ರ ಕನಿಷ್ಠಗಳ ಮಧ್ಯೆ ವಹಿವಾಟು ನಡೆಸಿತು. ರೂಪಾಯಿ ಅಂತಿಮವಾಗಿ ಅಮೆರಿಕನ್ ಕರೆನ್ಸಿಯ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.72 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 1 ಪೈಸೆ ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 0.8 ರಷ್ಟು ಏರಿಕೆಯಾಗಿ 77.59 ಡಾಲರ್ಗೆ ತಲುಪಿವೆ.
ಇದನ್ನೂ ಓದಿ : ಜಮ್ಮು & ಕಾಶ್ಮೀರಕ್ಕೆ 6 ತಿಂಗಳಲ್ಲಿ 1 ಕೋಟಿಗೂ ಅಧಿಕ ಪ್ರವಾಸಿಗರ ಭೇಟಿ - Jammu Kashmir Tourism