ಕಾನ್ಪುರ (ಉತ್ತರ ಪ್ರದೇಶ): ಪತ್ನಿಗೆ ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್ ನೀಡಿದ ಆರೋಪದಡಿ ಪತಿ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅಲ್ಲದೇ, ಆರೋಪಿ ಗಂಡನ ಸಹೋದರ ಆತ್ಮೀಯ ಕ್ಷಣಗಳ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾಳೆ.
ಇಲ್ಲಿನ ಬೇಕಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ನೊಂದ ಮಹಿಳೆ, 2022ರಲ್ಲಿ ಮೆರಾಜ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಆದರೆ, ಮದುವೆಯಲ್ಲಿ ನೀಡಿದ ವರದಕ್ಷಿಣೆಯಿಂದ ಮೆರಾಜ್ ಕುಟುಂಬವು ಸಂತೋಷವಾಗಿರಲಿಲ್ಲ. ಇದರಿಂದ ಕುಟುಂಬಸ್ಥರು ಪ್ರತಿದಿನ ಕಿರುಕುಳ ನೀಡುತ್ತಿದ್ದರು. ಇಷ್ಟೇ ಅಲ್ಲ, ನಾನು ಗರ್ಭಿಣಿಯಾದಾಗ ಗಂಡನ ಸಂಬಂಧಿಕರು ಮಗುವಿನ ಲಿಂಗ ಪರೀಕ್ಷೆ ಮಾಡಿದರು. ಇದರಿಂದ ಹೊಟ್ಟೆಯಲ್ಲಿರುವುದು ಹೆಣ್ಣು ಮಗು ಎಂದು ತಿಳಿದು, ಆಹಾರ ಮತ್ತು ಪಾನೀಯವನ್ನು ಯಾವುದೋ ವಸ್ತು ಬೆರೆಸಿ ನೀಡಿದ್ದರು. ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೂ ಕರೆದುಕೊಂಡು ಹೋಗಲೂ ಒಪ್ಪಲಿಲ್ಲ. ಇದರಿಂದ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಈ ಆಘಾತದಿಂದ ನಾನು ತವರು ಮನೆಗೆ ಹೋಗಿದ್ದೆ. ಮರಳಿ ಬಂದಿರಲಿಲ್ಲ. ಬಹಳ ದಿನಗಳ ಬಳಿಕ ನನ್ನ ಬಳಿಗೆ ಪತಿ ಮೆರಾಜ್ ಬಂದು ಕ್ಷಮೆಯಾಚಿಸಿ ಒಟ್ಟಿಗೆ ಇರುವಂತೆ ಕೇಳಿಕೊಂಡಿದ್ದರು. ಇದಾದ ಮೇಲೆ ಆತನೊಂದಿಗೆ ಅತ್ತೆ-ಮಾವನ ಮನೆಗೆ ಬಂದಿದ್ದೆ. ಆದರೆ, ಇದಾದ ಕೆಲ ದಿನಗಳ ನಂತರ ಕುಡಿದ ಅಮಲಿನಲ್ಲಿ ಪತಿ ತನ್ನ ಹೆಸರಿನಲ್ಲಿ ಸಾಲ ಪಡೆದಿರುವುದಾಗಿ ತಿಳಿಸಿದ್ದ. ಅಲ್ಲದೇ, ನಾನು ಸತ್ತರೆ ಸಂಪೂರ್ಣ ಸಾಲ ಮನ್ನಾ ಆಗುತ್ತದೆ ಎಂದು ಹೇಳಿತೊಡಗಿದ್ದ. ಪತಿ ಮಾತು ಕೇಳದಿದ್ದಾಗ ನನ್ನನ್ನು ಥಳಿಸಿ ಹೆದ್ದಾರಿಗೆ ಕರೆದೊಯ್ದು, ಮೂರು ಬಾರಿ ತಲಾಖ್ ಹೇಳಿ ಕಾರು ಚಲಾಯಿಸಿಕೊಂಡು ಪತಿ ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಈ ಘಟನೆಯ ನಂತರ ನಾನು ಮತ್ತೆ ಪೋಷಕರ ಮನೆಗೆ ಬಂದು ಆಶ್ರಯ ಪಡೆದಿದ್ದೇನೆ. ಇದೀಗ ಪತಿ ಮತ್ತೆ ಕರೆ ಮಾಡಿ ಮನೆಗೆ ಬರುವಂತೆ ಹೇಳುತ್ತಿದ್ದಾನೆ. ಇದನ್ನು ನಿರಾಕರಿಸಿದ ಕಾರಣ ನಮ್ಮ ಖಾಸಗಿ ಕ್ಷಣದ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಹೊಸದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ದೂರಿನ ಮೇರೆಗೆ ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್ ಪ್ರಕರಣದಲ್ಲಿ ಪತಿ ಸೇರಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೇಕಮ್‌ಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಪಂಕಜ್ ಕುಮಾರ್ ತ್ಯಾಗಿ ತಿಳಿಸಿದ್ದಾರೆ.