ಹೈದರಾಬಾದ್, ತೆಲಂಗಾಣ: ಒಂದು ವರ್ಷದ ಹಿಂದೆ ಇಬ್ಬರು ವ್ಯಕ್ತಿಗಳು ಕೆಲಸಕ್ಕೆ ಎಂದು ಮನೆಗೆ ಬಂದಿದ್ದರು. ಮಾಲೀಕರು ಒಪ್ಪಿ ಅವರನ್ನು ಕೆಲಸಕ್ಕೆ ಸೇರಿಸಿದರು. ಅವರು ಸ್ವಲ್ಪ ಸಮಯದವರೆಗೆ ಆತ್ಮವಿಶ್ವಾಸದಿಂದ ನಟಿಸಿ ಮನೆಯಲ್ಲಿರುವ ವಸ್ತುಗಳನ್ನು ಗಮನಿಸಿದ್ದರು. ಈ ಮಧ್ಯೆ, ಅವರು ಇದ್ದಕ್ಕಿದ್ದಂತೆ ಕೆಲಸ ಬಿಟ್ಟಿದ್ದರು. ಬಹಳ ದಿನಗಳಿಂದ ವಾಪಸ್ ಆದ ಆ ಇಬ್ಬರು ಆ ಮನೆಗೆ ಕಳ್ಳತನಕ್ಕೆ ಮುಂದಾಗಿದ್ದರು. ಕುಟುಂಬಸ್ಥರಿಗೆ ಗನ್ ತೋರಿಸಿ ಬೆದರಿಸಿ ದರೋಡೆಗೆ ಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಿ ಅನಿರೀಕ್ಷಿತ ಟ್ವಿಸ್ಟ್ ನಡೆದಿದೆ.
ಕಳ್ಳರ ವಿರುದ್ಧ ತಾಯಿ - ಮಗಳು ಹೋರಾಟ: ಆ ಮನೆಯಲ್ಲಿದ್ದ ತಾಯಿ ಮತ್ತು ಹೆಣ್ಣುಮಕ್ಕಳು ದರೋಡೆಕೋರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇಗಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್‌ಪುರ ಜೈನ್ ಕಾಲೋನಿಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ಹಾಗೂ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ನವರತನ್ ಜೈನ್ ಹಾಗೂ ಆತನ ಪತ್ನಿ ಅಮಿತಾ ಮೆಹೋತ್ ರಸೂಲ್ ಪುರದ ಪೈಗಾ ಹೌಸಿಂಗ್ ಕಾಲೋನಿಯಲ್ಲಿ ವಾಸವಾಗಿದ್ದಾರೆ.
ಗುರುವಾರ ಮಧ್ಯಾಹ್ನ 2:15ರ ಸುಮಾರಿಗೆ ಅಮಿತಾ, ಆಕೆಯ ಮಗಳು ಮತ್ತು ಕೆಲಸದಾಕೆ ಮನೆಯಲ್ಲಿದ್ದರು. ಆ ವೇಳೆ, ಪ್ರೇಮಚಂದ್ ಹಾಗೂ ಸುಶೀಲ್‌ಕುಮಾರ್ ಕೊರಿಯರ್ ಸರ್ವೀಸ್ ಹೆಸರಿನಲ್ಲಿ ಮನೆಯ ಆವರಣಕ್ಕೆ ನುಗ್ಗಿದ್ದರು. ಈ ವೇಳೆ ಅಮಿತಾ ಅವರನ್ನು ಬಾಗಿಲಿನ ಹೊರಗೆ ಇರಲು ಹೇಳಿದ್ದಾರೆ. ಅಷ್ಟರಲ್ಲಿ ಹೆಲ್ಮೆಟ್ ಧರಿಸಿದ್ದ ಸುಶೀಲ್‌ಕುಮಾರ್ ಮನೆಗೆ ನುಗ್ಗಿ ತನ್ನ ಬ್ಯಾಗ್‌ನಿಂದ ಗನ್ ತೆಗೆದು ಮಹಿಳೆಯತ್ತ ತೋರಿಸಿದ್ದಾನೆ. ಈ ಕ್ರಮದಲ್ಲಿ ಪ್ರೇಮಚಂದ್ ಅಡುಗೆ ಕೋಣೆಗೆ ತೆರಳಿ ಕೆಲಸದಾಕೆಯ ಕುತ್ತಿಗೆಗೆ ಚಾಕು ಇಟ್ಟಿದ್ದಾನೆ. ಬೆಲೆ ಬಾಳುವ ವಸ್ತುಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಸುಶೀಲ್ ಗೆ ಅಮಿತಾ ಕಾಲಿನಿಂದ ಬಲವಾಗಿ ಒದ್ದಿದ್ದಾಳೆ. ಈ ಸಂದರ್ಭದಲ್ಲಿ ಮಗಳೂ ಸಹ ತಾಯಿಯ ಸಹಾಯಕ್ಕೆ ದೌಡಾಯಿಸಿದ್ದಾಳೆ. ಆರೋಪಿ ಸುಶೀಲ್, ತಾಯಿ ಮತ್ತು ಮಗಳ ಮೇಲೆ ಹಲ್ಲೆ ನಡೆಸುತ್ತಿದ್ದರೂ ಅಮಿತಾ ಜೋರಾಗಿ ಕೂಗಿ ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳಾದ ಸುಶೀಲ್ ಮತ್ತು ಪ್ರೇಮಚಂದ ಬಂದೂಕು ಬಿಟ್ಟು ಓಡಿ ಹೋಗಿದ್ದಾರೆ. ಇದಕ್ಕೂ ಮುನ್ನ ತಾಯಿ ಮತ್ತು ಮಗಳ ಕಿರುಚಾಟ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಆಗಮಿಸಿದ್ದಾರೆ. ಮತ್ತೊಂದೆಡೆ ಪ್ರೇಮಚಂದ್ ಸ್ಥಳದಿಂದ ಚಾಕು ತೋರಿಸಿ ಬೆದರಿಸಿ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸುಶೀಲ್ ನನ್ನು ಜಿಆರ್ಪಿ ಪೊಲೀಸರು ಕಾಜಿಪೇಟೆಯಲ್ಲಿ ಬಂಧಿಸಿದ್ದಾರೆ. ಅಮಿತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಬೇಗಂಪೇಟೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಯೋಜನೆ ಪ್ರಕಾರ ದರೋಡೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಒಂದು ವರ್ಷದ ಹಿಂದೆ ಇಬ್ಬರೂ ಮನೆಗೆಲಸ ಕೇಳಿಕೊಂಡು ಅಮಿತಾ ಮನೆಗೆ ಬಂದಿದ್ದರು. ಕೆಲ ಕಾಲ ಕೆಲಸ ಮಾಡಿ ಬಿಟ್ಟಿದ್ದರು. ಈ ವೇಳೆ ಮನೆಯಲ್ಲಿದ್ದ ವಸ್ತುಗಳು ಎಲ್ಲಿವೆ ಎಂದು ತಿಳಿದು ಏಕಾಏಕಿ ಕಳ್ಳತನಕ್ಕೆ ಸ್ಕೇಚ್ ಹಾಕಿದ್ದರು. ಗುರುವಾರ ಮಧ್ಯಾಹ್ನ ಮತ್ತೆ ಆ ಮನೆಗೆ ಬಂದ ಆರೋಪಿಗಳು ದರೋಡೆಗೆ ವಿಫಲ ಯತ್ನ ನಡೆಸಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಇನ್ನು ತಾಯಿ ಮತ್ತು ಮಗಳ ಧೈರ್ಯ ತೋರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ತಾಯಿ ಮಗಳ ಶೌರ್ಯಕ್ಕೆ ಸೆಲೆಬ್ರಿಟಿಗಳ ಅಭಿನಂದನೆ: ತಾಯಿಯ ಶೌರ್ಯ ನೋಡಿ ಹಲವರು ಅಭಿನಂದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಉತ್ತರಮಂಡಲ ಡಿಸಿಪಿ ರೋಹಿಣಿ ಪ್ರಿಯದರ್ಶಿನಿ ಅಮಿತಾ ಮತ್ತು ಅವರ ಮಗಳನ್ನು ಅವರ ಶೌರ್ಯಕ್ಕಾಗಿ ಗೌರವಿಸಿದ್ದಾರೆ. ಮತ್ತೊಂದೆಡೆ, ಕಳ್ಳರನ್ನು ಎದುರಿಸಿದ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
ಓದಿ: ಹಿಮಾಚಲ ಪ್ರದೇಶ: 6ನೇ ತರಗತಿ ವಿದ್ಯಾರ್ಥಿನಿ ಮೇಲೆ ಸ್ನೇಹಿತೆಯ ತಂದೆಯಿಂದಲೇ ಅತ್ಯಾಚಾರ - RAPE CASE