ಬೆಂಗಳೂರು: ಕಾರಿಗೆ ಬೆಂಕಿ ತಗುಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಬ್ಯಾಡರಹಳ್ಳಿಯ ಮುದ್ದಿನಪಾಳ್ಯದಲ್ಲಿ ಶನಿವಾರ ಮಧ್ಯಾಹ್ನ ವರದಿಯಾಗಿತ್ತು. ಪ್ರಕರಣದ ತನಿಖೆಯಲ್ಲಿ, ಇದು ಆತ್ಮಹತ್ಯೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ನಾಗರಭಾವಿ ಎರಡನೇ ಹಂತದ ನಿವಾಸಿ ಪ್ರದೀಪ್ (42) ಮೃತ ವ್ಯಕ್ತಿ.
ಹೋಟೆಲ್ ಉದ್ಯಮ ನಡೆಸುತ್ತಿದ್ದ ನಿವಾಸಿ ಪ್ರದೀಪ್ ಸ್ಕೋಡಾ ಕಾರು ಚಲಾಯಿಸಿಕೊಂಡು ಬಂದು, ಮಧ್ಯಾಹ್ನ 2:45ರ ಸುಮಾರಿಗೆ ಮುದ್ದಿನಪಾಳ್ಯದ ಬಡಾವಣೆ ಬಳಿ ಕಾರು ನಿಲ್ಲಿಸಿ ಕೆಲವು ಕಾಲ ಕಾರಿನಲ್ಲಿ ಕುಳಿತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದು ನೋಡಿದಾಗ ಕಾರಿನೊಳಗೆ ಓರ್ವ ವ್ಯಕ್ತಿ ಇರುವುದನ್ನು ಗಮನಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದರು. ಅಷ್ಟರಲ್ಲಿ ಕಾರಿನೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದ ಎಂದು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಉದ್ಯಮಿ ಪ್ರದೀಪ್ ಆರ್ಥಿಕ ನಷ್ಟಕ್ಕೊಳಗಾಗಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ ಮನನೊಂದಿದ್ದ ಅವರು ಕಾರಿನಲ್ಲಿ ಕುಳಿತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದರಿಂದ ಮೊದಲು ಮೃತದೇಹ ಗುರುತಿಸಲು ಸಾಧ್ಯವಾಗಿರಲಿಲ್ಲ. ಕಾರು ಬಂದಿದ್ದ ಮಾರ್ಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಆಧರಿಸಿ ಗುರುತು ಪತ್ತೆ ಮಾಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಬ್ಯಾಡರಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಶಾಲೆಗೆ ಹೋಗದೇ ಮೊಬೈಲ್ ನೋಡುತ್ತಿದ್ದ ಮಗ, ಪುತ್ರನ ಹತ್ಯೆ ಮಾಡಿದ ತಂದೆಯ ಬಂಧನ