ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರೊಬ್ಬರ ಮೇಲೆ ಗುಂಡಿನ ದಾಳಿ ಮಾಡಿದ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಅನಿಮೇಶ್ ರಾಯ್ ದಾಳಿಗೆ ಒಳಗಾದ ಮುಖಂಡನಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಎಂಸಿ ಮುಖಂಡರಾದ ಅನಿಮೇಶ್ ರಾಯ್, ಇಲ್ಲಿನ ಸಿತಾಲ್ಕುಚಿಯ ಲಾಲ್‌ಬಜಾರ್‌ನ ಪಂಚಾಯತ್ ಪ್ರಧಾನರೂ ಆಗಿದ್ದಾರೆ. ಗುರುವಾರ ರಾತ್ರಿ ತಮ್ಮ ಸಹಾಯಕರೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಶಿತಾಲ್ಕುಚಿಯಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ರಾಯ್ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಕಾಲಿಗೆ ಗುಂಡಿನ ಗಾಯಗಳಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ.
ತಕ್ಷಣವೇ ಸ್ಥಳೀಯರು ರಾಯ್ ಅವರನ್ನು ರಕ್ಷಿಸಿ ಶಿತಾಲ್ಕುಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೂಚ್ ಬೆಹರ್ ರವಾನಿಸಲಾಗಿದೆ. ಸದ್ಯ ಅವರು ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇವರ ಮೇಲೆ ದಾಳಿ ಯಾಕೆ ನಡೆಸಲಾಗಿದೆ ಎಂದು ಗೊತ್ತಾಗಿಲ್ಲ. ಅಲ್ಲದೇ, ಇನ್ನೂ ದಾಳಿಕೋರರ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ರಾಯ್ ಅವರ ಕುಟುಂಬಸ್ಥರು ಮತ್ತು ಸಹಚರರಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮತ್ತೊಂದೆಡೆ, ಗುಂಡಿನ ದಾಳಿ ಕುರಿತು ಟಿಎಂಸಿ ಮತ್ತು ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಈ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಟಿಎಂಸಿ ಮುಖಂಡರು ಆರೋಪಿಸಿದ್ದರೆ, ಬಿಜೆಪಿ ಕಾರ್ಯಕರ್ತರು ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಲಾಗುತ್ತಿದೆ ಎಂದು ನಿರಾಕರಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 19ರಂದು ಕೂಚ್ ಬೆಹಾರ್‌ನಲ್ಲಿ ಮೊದಲ ಹಂತದ ಚುನಾವಣೆ ನಡೆದಿತ್ತು. ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ, ಒಟ್ಟಾರೆ ಮತದಾನ ಶಾಂತಿಯುತವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಒಟ್ಟಾರೆ 42 ಲೋಕಸಭೆ ಕ್ಷೇತ್ರಗಳು ಇವೆ. ಎಲ್ಲ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಈಗಾಗಲೇ ನಾಲ್ಕು ಹಂತಗಳ ಮತದಾನ ಪೂರ್ಣಗೊಂಡಿದೆ. ಇನ್ನೂ ಮೂರು ಹಂತಗಳ ಚುನಾವಣೆ ಬಾಕಿ ಇದೆ.
ಈ ಹಿಂದಿನ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 22, ಬಿಜೆಪಿ 18 ಮತ್ತು ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಕೆಲ ಕ್ಷೇತ್ರಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರಿಂದಲೂ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿದೆ.
ಇದನ್ನೂ ಓದಿ: ಶಾಲಾ ಸಮವಸ್ತ್ರದಲ್ಲಿ ಕೊಳೆ; ಕೋಪಗೊಂಡ ತಾಯಿಯಿಂದ ಪುತ್ರನ ಕೊಲೆ