ಬಾಲಾಘಾಟ್: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಖೈರ್ಲಾಂಜಿ ಸಿಲಾರಿ ಗ್ರಾಮದಲ್ಲಿ ಭಾನುವಾರ ರೈತನೊಬ್ಬನನ್ನು ಹುಲಿಯೊಂದು ಕೊಂದು ತಿಂದಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಜನಾಂಗದ ರೈತನನ್ನು ಹುಲಿ ಬೇಟೆಯಾಡಿ, ಆತನ ದೇಹದ ಅರ್ಧದಷ್ಟು ಭಾಗವನ್ನು ತಿಂದಿದೆ. ಶವ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಹೊಲಕ್ಕೆ ಹೋದವ ಮರಳಿ ಬರಲಿಲ್ಲ: ರೈತ ಸುಖರಾಮ್ ಉಯ್ಕೆ (55) ಎಂಬವರೇ ಹುಲಿಗೆ ಬಲಿಯಾದ ರೈತ. ದನಗಳನ್ನು ಮೇಯಿಸಲು ಜೊತೆಗೆ ಕರೆದೊಯ್ದಿದ್ದ ರೈತ, ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಆದರೆ ದನಗಳು ಮಾತ್ರ ಮನೆಗೆ ಮರಳಿದ್ದವು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಸೇರಿ ಸುಖರಾಮ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ಸುಖರಾಮ್ ಮೃತ ದೇಹ ತಿನ್ನುತ್ತಿದ್ದ ಹುಲಿ: ಗ್ರಾಮಸ್ಥರು ಹಾಗೂ ಪಕ್ಕದ ಊರಿನವರೆಲ್ಲ ಸೇರಿಕೊಂಡು ಮಧ್ಯಾಹ್ನದ ವೇಳೆಗೆ ಹೊಲಗಳಿಗೆ ಹೋಗಿ ಹುಡುಕಾಡಿದ್ದಾರೆ. ಅಲ್ಲಿ ಸುಖರಾಮ್ ಅವರ ಚಪ್ಪಲಿ ಮತ್ತು ಟವೆಲ್ ಬಿದ್ದಿರುವುದು ಕಂಡು ಬಂದಿದೆ. ಸಮೀಪದ ಪೊದೆಗಳಲ್ಲಿ ಎಳೆದೊಯ್ದಿರುವ ಗುರುತುಗಳು ಕಾಣಿಸಿದ್ದು, ಹುಲಿಯೊಂದು ಸಮೀಪದ ಕಬ್ಬಿನ ಗದ್ದೆಯಲ್ಲಿ ಸುಖರಾಮ್ ಮೃತದೇಹವನ್ನು ಭಕ್ಷಿಸುತ್ತಿರುವುದನ್ನು ಕಂಡಿದ್ದಾರೆ. ಗ್ರಾಮಸ್ಥರನ್ನು ಕಂಡೊಡನೆ ಎಚ್ಚೆತ್ತುಕೊಂಡ ಹುಲಿ ಸ್ಥಳದಿಂದ ಓಡಿ ಹೋಗಿದೆ. ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸುಖರಾಮ್ ಅವರ ತಲೆ ಮತ್ತು ಕುತ್ತಿಗೆಯ ಮೇಲೆ ತೀವ್ರ ಗಾಯಗಳಾಗಿತ್ತು. ಅಲ್ಲದೇ, ಅವರ ಸೊಂಟದ ಕೆಳಗಿನ ಭಾಗವನ್ನು ಹುಲಿಯು ತಿಂದು ಮುಗಿಸಿತ್ತು. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕೆಲ ದಿನಗಳಿಂದಲೂ ಕಾಣಿಸಿಕೊಂಡಿದ್ದ ಹುಲಿ: ಕೆಲ ದಿನಗಳ ಹಿಂದೆಯೇ ಹುಲಿ ಓಡಾಡುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಅರಣ್ಯಾಧಿಕಾರಿಗಳು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಹುಲಿಗಾಗಿ ಹುಡುಕಾಟ ನಡೆಸಿದ್ದರು. ಅರಣ್ಯಾಧಿಕಾರಿಗಳ ಪ್ರಕಾರ, ''ಎರಡು ದಿನಗಳ ಹಿಂದೆ ಹಸುವಿನ ಕರುವಿನ ಮೇಲೆ ಹುಲಿ ದಾಳಿ ನಡೆಸಿತ್ತು. ಶನಿವಾರದಿಂದ ಅರಣ್ಯ ತಂಡ ಡ್ರೋನ್ ಕ್ಯಾಮೆರಾಗಳ ಮೂಲಕ ಶೋಧ ನಡೆಸುತ್ತಿದ್ದರೂ ಹುಲಿಯ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಸಂಜೆಯ ನಂತರ ಮನೆಯಿಂದ ಹೊರಬಾರದಂತೆ ಮತ್ತು ರಾತ್ರಿಯಲ್ಲಿ ತೀರಾ ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗುವಂತೆ ಗ್ರಾಮಸ್ಥರಿಗೆ ನಿರಂತರವಾಗಿ ಎಚ್ಚರಿಕೆ ನೀಡಲಾಗಿದೆ. ಹಗಲಿನಲ್ಲಿ ಒಬ್ಬಂಟಿಯಾಗಿ ಹೊಲಗಳಿಗೆ ಹೋಗಬೇಡಿ ಮತ್ತು ಸಾಧ್ಯವಾದರೆ ಸಂಜೆ ಮನೆಗಳ ಸುತ್ತಮುತ್ತ ಪಟಾಕಿಗಳನ್ನು ಸಿಡಿಸುವಂತೆ'' ತಿಳಿಸಲಾಗಿದೆ.
ಇದನ್ನೂ ಓದಿ: ಕರುವಿನ ರಕ್ತದ ರುಚಿ ನೋಡಿ ಮತ್ತೆ ಬೇಟೆಗೆ ಬಂದ ಚಿರತೆ ಸೆರೆ : ವಿಡಿಯೋ
ಹುಲಿ ದಾಳಿ ಹಿನ್ನೆಲೆಯಲ್ಲಿ ಒಂದೆಡೆ ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಅರಣ್ಯ ಇಲಾಖೆ ನಿರಂತರವಾಗಿ ಗ್ರಾಮಸ್ಥರಿಗೆ ಸಲಹೆ ನೀಡುತ್ತಿದ್ದರೆ, ಮತ್ತೊಂದೆಡೆ ಈ ಘಟನೆ ಬಗ್ಗೆ ಗ್ರಾಮಸ್ಥರು ತೀವ್ರ ಆತಂಕ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿರತೆ ದಾಳಿಗೆ 22 ವರ್ಷದ ಯುವತಿ ಬಲಿ: ಆಕ್ರಂದನ