ಕಾರವಾರ: ನಗರದ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್ಗೆ ಸೇರಿದ ಗ್ರಾಸಿಮ್ ಇಂಡಸ್ಟ್ರೀಸ್‌ನಲ್ಲಿ ರಾಸಾಯನಿಕ ಸೋರಿಕೆಯಾಗಿ 19 ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ.
ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಹಾಗೂ ಬಿಹಾರ ಮೂಲದ ನೀಲಕಂಠ (22), ಜಹಾನೂರ (20), ಕಮಲೇಶ ವರ್ಮಾ (22), ನಂದಕಿಶೋರ (21), ದೀಪು (28), ಅಜೀಜ್ (23), ಕಲ್ಲು (37), ಸುಜನ್ (26), ನಜೀದುಲ್ಲಾ (24), ಬೇಜನಕುಮಾರ್ (27), ಕಿಶನ್ ಕುಮಾರ್ (28) ಮೋಹಿತ ವರ್ಮಾ(21) ಸೇರಿದಂತೆ ಇತರೆ 7 ಮಂದಿ ಅಸ್ವಸ್ಥಗೊಂಡಿದ್ದರು.
ಇಂಡಸ್ಟ್ರೀಸ್ನ ಎಸ್‌ಸಿಎಲ್ ಪ್ಲಾಂಟ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಘಟನೆ ಬಳಿಕ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲದೆ ಕೆಲವರು ಕೆಮ್ಮು, ಗಂಟಲು ನೋವಿಗೆ ತುತ್ತಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರಲ್ಲಿ 15 ಮಂದಿಯನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಉಳಿದ ನಾಲ್ವರು ಕಾರ್ಮಿಕರಿಗೆ ಗ್ರಾಸಿಮ್ ಇಂಡಸ್ಟ್ರೀಸ್ ಆವರಣದಲ್ಲಿರುವ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ.
"ರಾಸಾಯನಿಕ ಸೋರಿಕೆಯಿಂದಾಗಿ ಅಸ್ವಸ್ಥಗೊಂಡ 15 ಮಂದಿಗೆ ಕಾರವಾರ ಜಿಲ್ಲಾಸ್ಪತ್ರೆ ಹಾಗೂ ನಾಲ್ವರಿಗೆ ಕಂಪನಿಯ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರಿಗೆ ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ" ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ರಮೇಶ್ ರಾವ್ ಮಾಹಿತಿ ನೀಡಿದರು.
ಪ್ರತಿಭಟನೆ ನಡೆಸಿದ ಸ್ಥಳೀಯರು: ಗ್ರಾಸಿಮ್ ಇಂಡಸ್ಟ್ರೀಸ್‌ನಲ್ಲಿ ಪದೇ ಪದೆ ದುರ್ಘಟನೆಗಳು ಮರುಕಳಿಸುತ್ತಿವೆ. ಆದರೂ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳೀಯರು ವಾಸವಾಗಿರುವ ಹೆದ್ದಾರಿಯ ಅಂಚಿನಲ್ಲಿಯೇ ರಾಸಾಯನಿಕ ತುಂಬಿದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಇತ್ತೀಚೆಗೆ ಗ್ರಾಸಿಮ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕ ಮೃತಪಟ್ಟಿದ್ದರು. ಅಲ್ಲದೆ ಈ ಬಗ್ಗೆ ಸೇಫ್ಟಿ ಆಡಿಟ್ ನಡೆಸಬೇಕು. ಅಲ್ಲಿವರೆಗೂ ಕಂಪನಿಯನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಸ್ಥಳೀಯರು ಹಾಗೂ ನಗರಸಭೆ ಸದಸ್ಯರು, ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದರು. ಇಷ್ಟಾದರೂ ಕಂಪನಿ ಅಧಿಕಾರಿಗಳು ಹೊರಗೆ ಬಾರದೇ ಇರುವುದನ್ನು ಖಂಡಿಸಿ ಕಂಪನಿಯ ಆವರಣದಲ್ಲಿಯೇ ಕುಳಿತು ಧಿಕ್ಕಾರ ಕೂಗಿದರು.
ಘಟನೆ ಬಳಿಕ ತಹಶೀಲ್ದಾರ್ ಎನ್.ಎಸ್ ನರೋನಾ, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ರಮೇಶ್ ರಾವ್ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ತಾತ್ಕಾಲಿಕವಾಗಿ ಪ್ಲಾಂಟ್ ಮುಚ್ಚುವ ಭರವಸೆ : ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಪ್ಲಾಂಟ್ನ ಮುಖ್ಯಸ್ಥ ಖುಷ್ ಶರ್ಮಾ ಆಗಮಿಸಿದರು. ಈ ವೇಳೆ ಪ್ರತಿಭಟನಾಕಾರರು ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿ, ಘಟಕ ಮುಚ್ಚಲು ಒತ್ತಾಯಿಸಿದರು. ಇದೇ ವೇಳೆ ಶಾಸಕ ಸತೀಶ್ ಸೈಲ್ ಕೂಡ ಕಂಪನಿ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಮಾತನಾಡಿ, ಕಂಪನಿಯಲ್ಲಿ ಇಷ್ಟೊಂದು ದೊಡ್ಡ ಘಟನೆ ನಡೆದಿದೆ. ಪದೇ ಪದೆ ಈ ಘಟನೆ ಮರುಕಳಿಸುತ್ತಿರುವ ಕಾರಣ ಸಂಜೆ 7.30ರ ಒಳಗೆ ಇಡೀ ಪ್ಲಾಂಟ್ ಮುಚ್ಚುವುದಲ್ಲದೇ ಎಲ್ಲಾ ಕಾರ್ಮಿಕರನ್ನು ಹೊರಗೆ ಕಳುಹಿಸಲು ಸೂಚನೆ ನೀಡಿದರು. ಶಾಸಕರ ಮಾತಿಗೆ ಒಪ್ಪಿಗೆ ಸೂಚಿಸಿದ ಪ್ಲಾಂಟ್ ಮುಖ್ಯಸ್ಥರು, ಪ್ಲಾಂಟ್ ಮುಚ್ಚುವ ಭರವಸೆ ನೀಡಿದರು. ಸೇಫ್ಟಿ ಆಡಿಟ್ ಮಾಡಿ ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ ಪ್ಲಾಂಟ್ ತೆರೆಯಲು ನಿರ್ಧಾರಕ್ಕೆ ಬಂದಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಯಿತು.
"ಇಂಡಸ್ಟ್ರೀಸ್‌ನಲ್ಲಿ ದುರ್ಘಟನೆ ನಡೆದು ಮೂರ್ನಾಲ್ಕು ಗಂಟೆ ಕಳೆದರೂ ಪ್ಲಾಂಟ್ ಬಂದ್ ಮಾಡಿಲ್ಲ. ಅಲ್ಲದೆ ಅಕ್ಕ ಪಕ್ಕದ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದವರ ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ. ಇಂಡಸ್ಟ್ರೀಸ್ ಪಕ್ಕದಲ್ಲಿಯೇ ಸ್ಥಳೀಯರ ಮನೆಗಳಿವೆ. ಅಣಕು ಕಾರ್ಯಾಚರಣೆ ವೇಳೆ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡುವ ಕಂಪನಿ ಅಧಿಕಾರಿಗಳು, ಘಟನೆ ನಿಜವಾಗಿ ನಡೆದಾಗಲೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕರ ಜೀವದ ಜೊತೆ ಕಂಪನಿಯ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ" ಎಂದು ಸ್ಥಳೀಯರಾದ ದೇವರಾಜ್ ಮೂಡಲಮಕ್ಕಿ ಕಿಡಿಕಾರಿದರು.
ಇದನ್ನೂ ಓದಿ:ರಾಸಾಯನಿಕ ಸೋರಿಕೆ : ಕಾರವಾರದಲ್ಲಿ 12ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ