ಪಟ್ಟನಂತಿಟ್ಟ (ಕೇರಳ): ಪಟ್ಟನಂತಿಟ್ಟಿನ 18 ವರ್ಷದ ಕ್ರೀಡಾಪಟುವೊಬ್ಬರು ತಾವು ಅಪ್ರಾಪ್ತೆಯಾಗಿದ್ದಾಗ ಐದು ವರ್ಷಗಳಲ್ಲಿ 60ಕ್ಕೂ ಹೆಚ್ಚು ಜನರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಶಿಕ್ಷಣ ಸಂಸ್ಥೆಯೊಂದರಲ್ಲಿ ಸಂತ್ರಸ್ತೆಯ ಶಿಕ್ಷಕರು ಸಂತ್ರಸ್ತೆಯ ನಡವಳಿಕೆಯಲ್ಲಿ ಬದಲಾವಣೆ ಗಮನಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ನಡೆಸಿದ ಕೌನ್ಸೆಲಿಂಗ್ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಸಿಡಬ್ಲ್ಯೂಸಿ (ಮಹಿಳಾ ಆಯೋಗ) ಬಾಲಕಿಯಿಂದ ಸ್ವೀಕರಿಸಿದ ಹೇಳಿಕೆಯನ್ನು ನೇರವಾಗಿ ಪತ್ತನಂತಿಟ್ಟ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕನಿಷ್ಠ 62 ಸಂಭಾವ್ಯ ಅಪರಾಧಿಗಳನ್ನು ಗುರುತಿಸಲಾಗಿದೆ. ಈ ಪತ್ತೆಯ ಆಧಾರದಲ್ಲಿ, ಎಲವುಂತಿಟ್ಟ ಪೊಲೀಸರು ಪೋಕ್ಸೋ ಕಾಯ್ದೆಯಡಿ 40ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ ಬಾಲಕಿಯನ್ನು ಶೋಷಿಸಿದವರಲ್ಲಿ ತರಬೇತುದಾರರು, ಕ್ರೀಡಾಪಟುಗಳು ಮತ್ತು ಸಹಪಾಠಿಗಳು ಸೇರಿದ್ದಾರೆ.
ಈಕೆ ಅಪ್ರಾಪ್ತೆಯಾಗಿದ್ದಾಗ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಬಿನ್ (24), ಎಸ್. ಸಂದೀಪ್ (30), ವಿ. ಕೆ. ವಿನೀತ್ (30), ಕೆ. ಆನಂದು (21), ಮತ್ತು ಶ್ರೀನಿ ಅಲಿಯಾಸ್ ಎಸ್. ಸುಧಿ ಶ್ರೀನಿ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚೆನ್ನೀರ್ಕರ ಮೂಲದವರು. ಇವರಲ್ಲಿ ಸುಧಿ ಶ್ರೀನಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತೊಂದು ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ.
ಮಹಿಳಾ ಅಧಿಕಾರಿಗಳು ಸಂತ್ರಸ್ತೆಯಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಪಟ್ಟಣಂತಿಟ್ಟ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ಗಳನ್ನು ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಣ್ಣಿನ ದೇಹವನ್ನು ಬಣ್ಣಿಸುವುದೂ ಲೈಂಗಿಕ ಕಿರುಕುಳಕ್ಕೆ ಸಮ : ಹೈಕೋರ್ಟ್