ಸುಕ್ಮಾ (ಛತ್ತೀಸ್ಗಢ): ಭದ್ರತಾ ಪಡೆ ಮೇಲೆ ದಾಳಿ ನಡೆಸಿ, 43 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ 9 ನಕ್ಸಲರು ಸುಕ್ಮಾದಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಶರಣಾದ ತಂಡದಲ್ಲಿ ಇಬ್ಬರು ಮಹಿಳೆಯರು ಇದ್ದು, ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳ ಮುಂದೆ ಶರಣಾದರು. ಮಾವೋಗಳ ತತ್ವಗಳಲ್ಲಿನ ಟೊಳ್ಳು ಮತ್ತು ಅಮಾನವೀಯ ತತ್ವ ಹಾಗೂ ಸಂಘಟನೆಯಲ್ಲಿನ ಆಂತರಿಕ ಕಲಹದಿಂದ ಅವರು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ ಎಂದು ಸುಕ್ಮಾ ಎಸ್ಪಿ ಕಿರಣ್ ಚವಾಣ್ ತಿಳಿಸಿದರು.
ಅಲ್ಲದೆ ರಾಜ್ಯ ಸರ್ಕಾರದ ನಿಯದ್ ನೆಲ್ಲನರ್ (ನಿಮ್ಮ ಉತ್ತಮ ಗ್ರಾಮ) ಯೋಜನೆಯಿಂದ ಕೂಡ ಪ್ರಭಾವಿತರಾಗಿರುವುದಾಗಿ ತಿಳಿಸಿದ್ದಾರೆ. ಈ ಯೋಜನೆಯು ಕುಗ್ರಾಮಗಳಿಗೆ ಅಭಿವೃದ್ಧಿ ಕಾರ್ಯದ ಸೌಲಭ್ಯ ಒದಗಿಸುತ್ತದೆ.
ಮಾವೊಗಳ ಪ್ಲಟೂನ್ ನಂಬರ್ 24 ಕಮಾಂಡರ್ ರನ್ಸಾಯಿ ಆಲಿಯಸ್ ಒಯಮ್ ಬುಸ್ಕಾ (34), ಪಿಎಲ್ಜಿಎ ಬೆಟಾಲಿಯನ್ ನಂ 1 ಪ್ರದೀಪ್ ಆಲಿಯಾಸ್ ರವ್ವಾ ರಾಕೇಶ್ (20) ಪತ್ತೆಗಾಗಿ 8 ಲಕ್ಷ ರೂ. ಹಣವನ್ನು ಘೋಷಿಸಲಾಗಿತ್ತು. ಇನ್ನು ಉಳಿದ ನಾಲ್ವರು 5 ಲಕ್ಷ ರೂ. ಹಾಗೂ ಓರ್ವ ಮಹಿಳಾ ನಕ್ಸಲರು 3 ಲಕ್ಷ, ಹಾಗೂ ಮಹಿಳೆಯರು ಸೇರಿದಂತೆ ಇನ್ನಿಬ್ಬರು ನಕ್ಸಲರು ತಲಾ 2 ಲಕ್ಷ ಹಣವನ್ನು ಸುಳಿವು ನೀಡಿದವರಿಗೆ ಘೋಷಿಸಲಾಗಿತ್ತು.
ರನ್ಸಾಯಿ 2007ರಲ್ಲಿ 7 ಜನ ಪೊಲೀಸರು ಸಾವನ್ನಪ್ಪಿದ್ದ ನಾರಾಯಪುರ ಜಿಲ್ಲೆಯಲ್ಲಿ ಜಾರಾ ಘಟ್ಟಿ ದಾಳಿಯಲ್ಲಿ ಭಾಗಿಯಾಗಿದ್ದ. 2007ರಲ್ಲಿ ಬಿಜಾಪುರ್ ಜಿಲ್ಲೆಯ ರಾಣಿಬೊಡ್ಲಿಯಲ್ಲಿ ನಡೆದ ದಾಳಿಯಲ್ಲಿ 55 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು. 2017ರ ಸುಕ್ಮಾದ ಬುರಕಪಲ್ ದಾಳಿಯಲ್ಲಿ 25 ಸಿಆರ್ಪಿಎಫ್ ಸಿಬ್ಬಂದಿ ಹತ್ಯೆ ಹಾಗೂ 2020ರ ಸುಕ್ಮಾದ ಮಿನ್ಪ ದಾಳಿಯಲ್ಲಿ 17 ಜನ ಭದ್ರತಾ ಸಿಬ್ಬಂದಿ ಸಾವಿಗೆ ಕಾರಣವಾದ ದಾಳಿಯಲ್ಲೂ ಈತ ಭಾಗಿಯಾಗಿದ್ದ.
ಬಂಧಿತರಾದ ಇನ್ನಿತರ ಶರಣಾಗತಿ ಕೂಡ ಭದ್ರತಾ ಪಡೆ ಮೇಲೆ ನಡೆಸಿದ ಹಲವು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಶರಣಾಗತಿಯಲ್ಲಿ ಕೊಂಟಾ ಪೊಲೀಸ್ ಠಾಣೆ, ಜಿಲ್ಲಾ ರಿಸರ್ವ್ ಗಾರ್ಡ್, ಗುಪ್ತಚರ ದಳ ತಂಡ ಹಾಗೂ 2 ಮತ್ತು 23ನೇ ಬೆಟಾಲಿಯನ್ ನಿರ್ಣಾಯಕ ಪಾತ್ರವನ್ನು ವಹಿಸಿವೆ.
ಶರಣಾಗತರಾದ ನಕ್ಸಲಿಗರಿಗೆ ಸರ್ಕಾರದ ನೀತಿಯಂತೆ ಪುನರ್ವಸತಿಗೆ 25 ಸಾವಿರ ಹಣವನ್ನು ನೀಡಲಾಗುವುದು. ಕಳೆದ ವರ್ಷ ಕೂಡ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶರಣಾಗಿರುವ ನಕ್ಸಲರ ಶಸ್ತ್ರಾಸ್ತ್ರಗಳು ಸಿಕ್ಕಿವೆ: ಗೃಹ ಸಚಿವ ಪರಮೇಶ್ವರ್