ಮಂಗಳೂರು: ನಗರದ ಹೊರವಲಯದಲ್ಲಿ ನಡೆಯುವ ನರಿಂಗಾನ ಕಂಬಳಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯರಿಗೆ ದಾರಿ ಮಧ್ಯೆ ನಾಟೆಕಲ್‌ನಲ್ಲಿ ಅಭಿಮಾನಿಗಳು ಹೂಮಳೆ ಸುರಿಸಿ ಭರ್ಜರಿ ಸ್ವಾಗತ ನೀಡಿದರು.
ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ ನಡೆಯುವ ನರಿಂಗಾನ ಕಂಬಳದಲ್ಲಿ ಭಾಗಿಯಾಗಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಬಳಿಕ ರಸ್ತೆ ಮಾರ್ಗವಾಗಿ ನರಿಂಗಾನ ಕಂಬಳಕ್ಕೆ ಆಗಮಿಸಿದ್ದರು. ಕಾರು ನಾಟೆಕಲ್ ತಲುಪುತ್ತಿದ್ದಂತೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು.
ನಾಟೆಕಲ್‌ನಲ್ಲಿ ಕಾರಿನಿಂದ ಇಳಿದ ಸಿಎಂ ಸಿದ್ದರಾಮಯ್ಯ ಅವರಿಗೆ ಬೃಹತ್ ಗಾತ್ರದ ಹೂವಿನ ಮಾಲೆ ಹಾಕಿ ಅಭಿಮಾನಿಗಳಿಂದ ಸ್ವಾಗತ ಮಾಡಲಾಯಿತು. ಬಳಿಕ ಹೂವಿನ ಮಳೆ ಸುರಿಸಿದರು. ಬಳಿಕ ನರಿಂಗಾನ ಕಂಬಳಕ್ಕೆ ಆಗಮಿಸುತ್ತಿದ್ದಂತೆ ಸಿಎಂ ನೋಡಲು ಮುಗಿಬಿದ್ದರು. ಈ ವೇಳೆ ಅಭಿಮಾನಿಗಳಿಗೆ ಸಿಎಂ ಶೇಕ್ ಹ್ಯಾಂಡ್ ಮಾಡಿದರು.
ಪರಿಹಾರ ವಿತರಿಸಿದ ಸಿಎಂ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜಿನಾಡಿ ಗ್ರಾಮದಲ್ಲಿ ಸಿಲಿಂಡರ್ ಸೋರಿಕೆಯಿಂದ ಉಂಟಾದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದರು.
ಒಂದೇ ಕುಟುಂಬದ ಖತೀಜತ್ತುಲ್ ಖುಬ್ರ, ಝಲೈಕಾ ಮೆಹ್ದಿ, ಸಲ್ಮಾ ಮಝಿಯಾ ಮೃತಪಟ್ಟವರಾಗಿದ್ದು, ಇವರ ಪರವಾಗಿ ತಲಾ ಐದು ಲಕ್ಷದ ಚೆಕ್ ಅನ್ನು (ಒಟ್ಟು 15 ಲಕ್ಷ) ಇವರ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿಗಳು ನೀಡಿದರು.
ನಾಟೆಕಲ್ ಮಂಜನಾಡಿ ಎಂಬಲ್ಲಿನ ಮನೆಯೊಂದರಲ್ಲಿ ಇತ್ತೀಚೆಗೆ ಉಂಟಾದ ಭಾರೀ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಇಬ್ಬರು ಪುತ್ರಿಯರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಮಂಜನಾಡಿಯ ಖಂಡಿಗ ನಿವಾಸಿ ವಿದೇಶದಲ್ಲಿರುವ ಮುತ್ತಲಿಬ್ ಎಂಬವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿತ್ತು.
ಮುತ್ತಲಿಬ್ ಪತ್ನಿ ಖುಬ್ರಾ ಮತ್ತು ಮೂವರು ಪುತ್ರಿಯರಾದ ಮೆಅದಿಯಾ, ಮಝಿಯಾ, ಮಾಯಿದಾ ಮನೆಯಲ್ಲಿ ಒಂದೇ ಕೋಣೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ ಮನೆಯೊಳಗಡೆ ಭಾರೀ ಸ್ಫೋಟಗೊಂಡ ಶಬ್ಧ ಕೇಳಿಬಂದಿತ್ತು. ಸ್ಫೋಟದ ತೀವ್ರತೆಗೆ ಆರ್‌ಸಿಸಿ ಮನೆಯ ಮೇಲ್ಭಾಗದಲ್ಲಿನ ಸಿಮೆಂಟ್ ಶೀಟ್ ಮೇಲ್ಚಾವಣಿ ಸಂಪೂರ್ಣ ಹಾರಿ ಹೋಗಿದೆ. ತಾಯಿ ಮಕ್ಕಳು ಮಲಗಿದ್ದ ಕೊಠಡಿ, ಮಂಚ, ಕಿಟಕಿ ಸಂಪೂರ್ಣ ಛಿದ್ರಗೊಂಡು ಸುಟ್ಟು ಕರಕಲಾಗಿದ್ದವು.
ಗಾಯದ ನಡುವೆಯೂ ಓರ್ವ ಪುತ್ರಿ ಮನೆ ಬಾಗಿಲು ತೆಗೆದಿದ್ದಾಳೆ. ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು, ಬೆಂಕಿ ನಂದಿಸಿ ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಮನೆಯೊಳಗಿದ್ದ ಅಡುಗೆ ಅನಿಲ ತುಂಬಿದ್ದ ಸಿಲಿಂಡರ್ ಸ್ಫೋಟಿಸಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ: ಸಿ ಟಿ ರವಿ ಕೇಸ್ ರೂಲಿಂಗ್ ಬಳಿಕವೂ ಸಿಐಡಿ ತನಿಖೆಗೆ ವಹಿಸಿರುವುದಕ್ಕೆ ಆಕ್ಷೇಪ; ಗೃಹ ಸಚಿವರಿಗೆ ಹೊರಟ್ಟಿ ಪತ್ರ
ಇದನ್ನೂ ಓದಿ: 'ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್' ; ಶೃಂಗೇರಿಯಲ್ಲಿ ಘೋಷಣೆ ಕೂಗಿದ ಕಾರ್ಯಕರ್ತರು