ಬಂಕಾ(ಬಿಹಾರ): ಕಳ್ಳತನವಾದ ಬರೀ 35 ರೂಪಾಯಿಗೋಸ್ಕರ ಶಿಕ್ಷಕಿಯೊಬ್ಬರು 105 ವಿದ್ಯಾರ್ಥಿಗಳನ್ನು ದುರ್ಗಾ ದೇವಿಯ ಮುಂದೆ ಪ್ರಮಾಣ ಮಾಡಿಸಿದ ವಿಚಿತ್ರ ಘಟನೆ ಬಿಹಾರದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೋಧಕಿಯ ಈ ನಡೆಯ ವಿರುದ್ಧ ಪೋಷಕರು ನೀಡಿದ ದೂರಿನನ್ವಯ ಅವರನ್ನು ಬೇರೊಂದು ಶಾಲೆಗೆ ವರ್ಗಾವಣೆ ಮಾಡಲಾಗಿದೆ.
ಪರ್ಸ್ನಲ್ಲಿದ್ದ 35 ರೂಪಾಯಿ ಹಣವನ್ನು ಶಾಲೆಯ ಮಕ್ಕಳೇ ಕದ್ದಿದ್ದಾರೆ ಎಂದು ಅನುಮಾನಿಸಿದ ಶಿಕ್ಷಕಿ ಪ್ರತಿಯೊಬ್ಬರನ್ನೂ ಪರಿಶೀಲನೆ ಮಾಡಿದ್ದಾರೆ. ಹಣ ಸಿಗದಿದ್ದಾಗ, ಇಷ್ಟಕ್ಕೆ ಸುಮ್ಮನಾಗದೇ ಎಲ್ಲರನ್ನೂ ಹತ್ತಿರದ ದುರ್ಗಾದೇವಿ ದೇವಸ್ಥಾನಕ್ಕೆ ಕರೆದೊಯ್ದು 'ನಾನು ಹಣ ಕದ್ದಿಲ್ಲ' ಎಂದು ಆಣೆ ಮಾಡುವಂತೆ ಹೇಳಿದ್ದಾರೆ. ಮಕ್ಕಳನ್ನು ಕಳ್ಳರಂತೆ ಕಂಡ ಶಿಕ್ಷಕಿಯ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ: ಈ ಘಟನೆ ಫೆಬ್ರವರಿ 21 ರಂದು ಇಲ್ಲಿನ ರಾಜೌನ್ ಬ್ಲಾಕ್‌ನ ಅಸ್ಮಾನಿಚಕ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿದ್ದಾಗ ಶಿಕ್ಷಕಿಯ ಪರ್ಸ್ನಲ್ಲಿ 35 ರೂಪಾಯಿ ಕಳ್ಳತನವಾಗಿದೆ. ಇದನ್ನು ಮಕ್ಕಳೇ ಕದ್ದಿದ್ದಾರೆ ಎಂದು ಶಿಕ್ಷಕಿ ಅನುಮಾನಿಸಿದ್ದಾರೆ. ಬಳಿಕ ಇಡೀ ಶಾಲೆಯ 105 ಮಕ್ಕಳ ಜೇಬನ್ನು ಒಬ್ಬೊಬ್ಬರಂತೆ ತಪಾಸಣೆ ಮಾಡಿದ್ದಾರೆ. ಆದರೆ ಯಾರ ಬಳಿಯೂ ಹಣ ಸಿಕ್ಕಿಲ್ಲ. ಆದರೂ ಬಿಡದ ಶಿಕ್ಷಕಿ ಇಲ್ಲಿಯ ಯಾರೋ ಒಬ್ಬರು ಹಣ ಕದ್ದಿದ್ದಾರೆ ಎಂದು ಪಟ್ಟು ಹಿಡಿದಿದ್ದಾರೆ.
ದೇವಿ ಮುಂದೆ ಆಣೆ: ಎಲ್ಲ ಮಕ್ಕಳನ್ನು ತಪಾಸಣೆ ನಡೆಸಿ ತಡಕಾಡಿದರೂ ಹಣ ಸಿಗದಿದ್ದಾಗ ಮತ್ತಷ್ಟು ಸಿಟ್ಟಾದ ಶಿಕ್ಷಕಿ, ಎಲ್ಲರನ್ನೂ ಊರಿನ ದುರ್ಗಾದೇವಿ ದೇವಸ್ಥಾನಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ನಾನು ಹಣ ಕದ್ದಿಲ್ಲ ಎಂದು ಆಣೆ ಮಾಡಲು ಮಕ್ಕಳಿಗೆ ಒತ್ತಾಯಿಸಿದ್ದಾರೆ. ಎಲ್ಲರೂ ಕಣ ಚೋರಿ ಮಾಡಿಲ್ಲ ಎಂದು ದೇವಿಯ ಮುಂದೆ ಪ್ರಮಾಣ ಮಾಡಿದ್ದಾರೆ.
ಈ ವಿಷಯ ಮಕ್ಕಳ ಪೋಷಕರ ಕಿವಿಗೆ ಬಿದ್ದಿದೆ. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 35 ರೂಪಾಯಿ ಹಣಕ್ಕೋಸ್ಕರ ಮಕ್ಕಳನ್ನು ದೇವಿ ಮುಂದೆ ಪ್ರಮಾಣ ಮಾಡಿಸಿದ್ದನ್ನು ಟೀಕಿಸಿದ್ದಾರೆ. ಅಲ್ಲದೇ ಶಾಲೆಯ ವಿದ್ಯಾರ್ಥಿಗಳನ್ನು ಕಳ್ಳರಂತೆ ಕಂಡಿದ್ದಕ್ಕೆ ಛೀಮಾರಿ ಹಾಕಿದ್ದಾರೆ. ಪೋಷಕರು ಮತ್ತು ಶಿಕ್ಷಕಿಯ ನಡುವಿನ ವಾಗ್ವಾದದಿಂದ ಶಾಲೆಯಲ್ಲಿ ಹೈಡ್ರಾಮಾವೇ ನಡೆಯಿತು.
ಘಟನೆಯ ಬಗ್ಗೆ ಶಿಕ್ಷಣ ಇಲಾಖೆಯ ಮೇಲಧಿಕಾರಿಗೆ ಮಾಹಿತಿ ನೀಡಲಾಗಿದೆ. ಶಾಲೆಗೆ ಬಂದ ಶಿಕ್ಷಣಾಧಿಕಾರಿ ಪೋಷಕರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಕ್ಕಳ ಪೋಷಕರು, ಶಿಕ್ಷಕಿಯನ್ನು ಶಾಲೆಯಿಂದ ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಶಿಕ್ಷಣಾಧಿಕಾರಿ ಒಪ್ಪಿದ ಬಳಿಕ ಪರಿಸ್ಥಿತಿ ಶಾಂತವಾಗಿದೆ. ಸದ್ಯ ಶಿಕ್ಷಕಿಯನ್ನು ಬೇರೊಂದು ಶಾಲೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಪದೇ ಪದೆ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ: ವಾಹನ ನಾಶಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ