ನವದೆಹಲಿ: ಮಕ್ಕಳ ಅಶ್ಲೀಲ ವಿಡಿಯೋ ಡೌನ್‌ಲೋಡ್, ಸಂಗ್ರಹ ಮತ್ತು ವೀಕ್ಷಣೆ ಮಾಡುವುದು ಪೊಕ್ಸೋ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಜೆ.ಪಿ.ಪರ್ದಿವಾಲ ಅವರಿದ್ದ ಪೀಠ ಈ ಆದೇಶ ನೀಡಿತು. ಈ ಹಿಂದೆ ಮಕ್ಕಳ ಅಶ್ಲೀಲ ಚಿತ್ರಗಳ ಡೌನ್‌ಲೋಡ್ ಮತ್ತು ವೀಕ್ಷಣೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು.
ಮದ್ರಾಸ್ ಹೈಕೋರ್ಟ್ ನೀಡಿರುವ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೊಬೈಲ್ ಸೇರಿದಂತೆ ಇನ್ನಿತರ ಸಾಧನದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದೂ ಕೂಡಾ ಪೊಕ್ಸೋ ಕಾಯ್ದೆಯಡಿ ಅಪರಾಧವೇ ಎಂದು ಸ್ಪಷ್ಟಪಡಿಸಿದೆ.
ಇದರ ಜೊತೆಗೆ, ಮಕ್ಕಳ ಅಶ್ಲೀಲ ಚಿತ್ರ ಎಂಬ ಪದವನ್ನು 'ಮಕ್ಕಳ ಲೈಂಗಿಕ ಶೋಷಣೆ' ಎಂಬುದಾಗಿ ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಎಲ್ಲ ನ್ಯಾಯಾಲಯಗಳಲ್ಲೂ ಮಕ್ಕಳ ಅಶ್ಲೀಲ ಚಿತ್ರ ಎಂಬ ಪದವನ್ನು ತಮ್ಮ ನ್ಯಾಯಾಲಯದ ಅದೇಶಗಳಲ್ಲೂ ಬಳಕೆ ಮಾಡದಂತೆ ನಿರ್ದೇಶನ ನೀಡಿದೆ.
ಮದ್ರಾಸ್ ಹೈಕೋರ್ಟ್ ಈ ಕುರಿತು ಆದೇಶ ನೀಡುವಾಗ ಘೋರ ತಪ್ಪು ಮಾಡಿದೆ. ಪ್ರಕರಣದಲ್ಲಿ ಖುಲಾಸೆಯಾಗಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮರು ಸ್ಥಾಪಿಸಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು?: 28 ವರ್ಷದ ವ್ಯಕ್ತಿಯೊಬ್ಬ ಮಕ್ಕಳ ಅಶ್ಲೀಲ ಚಿತ್ರವನ್ನು ತನ್ನ ಮೊಬೈಲ್ನಲ್ಲಿ ಡೌನ್‌ಲೋಡ್ ಮಾಡಿ ವೀಕ್ಷಣೆ ಮಾಡುತ್ತಿದ್ದ. ಈ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ಜನವರಿ 2024ರಂದು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಪೊಕ್ಸೋ ಕಾಯ್ದೆ 2012ರ ಅಡಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಮತ್ತು ಡೌನ್‌ಲೋಡ್ ಮಾಡುವುದು ಅಪರಾಧವಲ್ಲ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಣ ಆರೋಪ: ಶಿಕ್ಷಕನ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ