ಪಾಟ್ನಾ(ಬಿಹಾರ): ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ಹಾಗೂ ಮಾಜಿ ಸಿಎಂ ರಾಬ್ರಿ ದೇವಿ ಅವರ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಡಿದ ಮಾತಿಗೆ ಖಂಡನೆ ವ್ಯಕ್ತವಾಗುತ್ತಿದೆ.
ಬಿಹಾರದ ಕಟಿಹಾರ್ನಲ್ಲಿ ಶನಿವಾರ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಸಿಎಂ ನಿತೀಶ್, "ಅವರಿಬ್ಬರೂ ಸೇರಿಕೊಂಡು ಬರೀ ಮಕ್ಕಳನ್ನು ಹುಟ್ಟಿಸಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಅಷ್ಟೊಂದು ಮಕ್ಕಳನ್ನು ಯಾರೂ ಹುಟ್ಟಿಸಬಾರದು, ಆದರೆ ಅವರು ಅದನ್ನೇ ಮಾಡಿದ್ದಾರೆ" ಎಂದು ಹೇಳಿದ್ದರು.
ಸಿಎಂ ನಿತೀಶ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ರಾಷ್ಟ್ರೀಯ ಜನತಾ ದಳದ ವಕ್ತಾರೆ ಕಂಚನಾ ಯಾದವ್, "ಸೋಲಿನ ಭಯದಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಸ್ಯಾಸ್ಪದ ಮತ್ತು ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿತೀಶ್ ಜೀ, ಬಿಜೆಪಿ ನಿಮ್ಮ ಪಕ್ಷವನ್ನು ನಾಶಪಡಿಸುತ್ತಿದೆ ಮತ್ತು ಮೋದಿ ಜಿ ನಿಮ್ಮನ್ನು ವೇದಿಕೆಯಿಂದ ಹೊರ ಹಾಕುತ್ತಿದ್ದಾರೆ. ಆದರೆ ನೀವು ಆ ಕೋಪವನ್ನು ಲಾಲು ಜಿ ಅವರ ಮೇಲೆ ಏಕೆ ತೋರಿಸಿಕೊಳ್ಳುತ್ತಿರುವಿರಿ? ಎನ್ಡಿಎ ಮೈತ್ರಿಕೂಟದ ಎಲ್ಲ ನಾಯಕರು ಸೋಲಿನ ಭಯದಿಂದ ಹತಾಶರಾಗಿರುವುದರಿಂದ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಚಿರಾಗ್ ಜೀ ಈಗಲಾದರೂ ನೀವು ನಿತೀಶ್ ಕುಮಾರ್ ಜಿ ಮತ್ತು ಸಾಮ್ರಾಟ್ ಚೌಧರಿ ಜಿ ಅವರ ಬಗ್ಗೆಯೂ ಏನಾದರೂ ಮಾತನಾಡುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಸಿಎಂ ಹೇಳಿಕೆಯ ನಂತರ ತಕ್ಷಣ ಪ್ರತಿಕ್ರಿಯಿಸಿದ ಲಾಲು ಯಾದವ್ ಅವರ ಹಿರಿಯ ಮಗಳು ಮಿಸಾ ಭಾರತಿ, "ಈಗ ಅಂಕಲ್ ಜಿ (ನಿತೀಶ್ ಕುಮಾರ್) ಬಗ್ಗೆ ಹೇಳಲು ಏನೂ ಉಳಿದಿಲ್ಲ. ಬಿಹಾರದ ಮುಖ್ಯಮಂತ್ರಿ ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಬಿಹಾರದ ಜನರು ಅರ್ಥಮಾಡಿಕೊಳ್ಳುತ್ತಾರೆ. ಪ್ರಧಾನಿ ಮೋದಿ ಕುಟುಂಬವಾದದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದರೂ ಅಂಕಲ್ ಜಿ ಮಾತನಾಡಲು ಪ್ರಾರಂಭಿಸಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಅವರು ನಮಗೆಲ್ಲರಿಗೂ ಪೂಜ್ಯರು ಹಾಗೂ ಹಿರಿಯರಾಗಿದ್ದಾರೆ. ಅವರು ನಮ್ಮ ಬಗ್ಗೆ ಏನೇ ಹೇಳಿದರೂ ಅದನ್ನು ಆಶೀರ್ವಾದವೆಂದು ಭಾವಿಸುತ್ತೇವೆ. ಆದರೆ ಹೀಗೆ ವೈಯಕ್ತಿಕ ಟೀಕೆ ಮಾಡುವುದರಿಂದ ಬಿಹಾರದ ಜನರಿಗೆ ಸಿಗುವ ಲಾಭವಾದರೂ ಏನು? ಅವರು ಏನೇ ಹೇಳಿದರೂ ನಾವು ಅದನ್ನು ಆಶೀರ್ವಾದವೆಂದು ಸ್ವೀಕರಿಸುತ್ತೇವೆ. ಆದರೆ ಚುನಾವಣೆಯಲ್ಲಿ ವಿಷಯಗಳ ಬಗ್ಗೆ ಮಾತನಾಡಬೇಕು. ಯಾರ ಮೇಲಾದರೂ ಇಂತಹ ವೈಯಕ್ತಿಕ ಟೀಕೆಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ" ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ : 'ಬಣ್ಣ' ಬದಲಿಸಿದ ದೂರದರ್ಶನ: ಹೊಸ ರೂಪದಲ್ಲಿ ಕಂಗೊಳಿಸುತ್ತಿರುವ ವಾಹಿನಿ - Doordarshan