ನವದೆಹಲಿ: ಕೇಂದ್ರೀಯ ಬ್ಯಾಂಕರ್ಗಳ ಜಾಗತಿಕ ಶ್ರೇಯಾಂಕದಲ್ಲಿ ಉನ್ನತ ರೇಟಿಂಗ್ ಪಡೆದ ಹಿನ್ನೆಲೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದು, ಅವರ ನಾಯಕತ್ವದ ಮನ್ನಣೆ ಎಂದು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿ, ಎರಡನೇ ಬಾರಿಗೆ ಉನ್ನತ ರೇಟಿಂಗ್ ಪಡೆದಿದ್ದಕ್ಕೆ ಶುಭಾಶಯಕಗಳು. ಇದು ಆರ್ಬಿಐನಲ್ಲಿ ಅವರ ನಾಯಕತ್ವಕ್ಕೆ ಮನ್ನಣೆಯಾಗಿದ್ದು, ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಕೆಲಸವಾಗಿದೆ ಎಂದಿದ್ದಾರೆ.
Congratulations to RBI Governor Shri @DasShaktikanta for this feat, and that too for the second time. This is a recognition of his leadership at the RBI and his work towards ensuring economic growth and stability. https://t.co/lzfogAQb15
— Narendra Modi (@narendramodi) August 21, 2024
ಅಮೆರಿಕ ಮೂಲಕ ಗ್ಲೋಬಲ್ ಫೈನಾನ್ಸ್ ನಿಯತಕಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಪ್ರಮುಖ ಕೇಂದ್ರೀಯ ಬ್ಯಾಂಕ್ಗಳ ಜಾಗತಿಕ ಶ್ರೇಯಾಂಕದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ದಾಸ್ ಅವರು ಇನ್ನಿಬ್ಬರು ಕೇಂದ್ರೀಯ ಬ್ಯಾಂಕ್ ಗವರ್ನರ್ ಜೊತೆಗೆ ಅವರು ಎ+ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಗ್ಲೋಬಲ್ ಫೈನಾನ್ಸ್ ಮ್ಯಾಗಜೀನ್ ಪ್ರಕಾರ, ಹಣದುಬ್ಬರ ನಿಯಂತ್ರಣ, ಆರ್ಥಿಕ ಬೆಳವಣಿಗೆ ಗುರಿ, ಹಣಕಾಸಿನ ಸ್ಥಿರತೆ ಮತ್ತು ಬಡ್ಡಿ ದರ ನಿರ್ವಹಣೆ ಯಶಸ್ಸಿಗೆ ಎ ಯಿಂದ ಎಫ್ವರೆಗೆ ಗ್ರೇಡ್ಗಳನ್ನು ಹಂಚಿಕೆ ಮಾಡಲಾಗುವುದು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರ್ಬಿಐ, ಸತತ ಎರಡನೇ ಬಾರಿಗೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಜಾಗತಿಕ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ 2004ರಲ್ಲಿ ಎ+ ರೇಟ್ ಪಡೆದಿದ್ದಾರೆ ಎಂದು ಪ್ರಕಟಿಸಲು ಸಂತಸವಾಗುತ್ತಿದೆ ಎಂದು ತಿಳಿಸಿದೆ. ಶಕ್ತಿಕಾಂತ್ ದಾಸ್ ಅವರ ಜೊತೆಗೆ ಡೆನ್ಮಾರ್ಕ್ನ ಕ್ರಿಸ್ಟಿಯನ್ ಕೆಟೆಲ್ ಥಾಮ್ಸೆನ್ ಮತ್ತು ಸ್ವಿಟ್ಜರ್ಲೆಂಡ್ ಥಾಮಸ್ ಜೋರ್ಡನ್ ಕೂಡ ಕೇಂದ್ರ ಬ್ಯಾಂಕರ್ಸ್ ವರ್ಗದಲ್ಲಿ ಎ+ ಶ್ರೇಯಾಂಕ ಪಡೆದಿದ್ದಾರೆ.
ಏನಿದು ಶ್ರೇಯಾಂಕ: ಗ್ಲೋಬಲ್ ಫೈನಾನ್ಸ್ ವಾರ್ಷಿಕವಾಗಿ ಕೇಂದ್ರೀಯ ಬ್ಯಾಂಕರ್ ರಿಪೋರ್ಟ್ ಕಾರ್ಡ್ ಅನ್ನು ನೀಡುತ್ತದೆ. ಈ ಮೂಲಕ ಸ್ವಂತಿಕೆ, ಸೃಜನಶೀಲತೆ ಮತ್ತು ದೃಢತೆಯ ಮೂಲಕ ಆರ್ಥಿಕತೆ ತಂತ್ರಗಾರಿಕೆ ನಡೆಸಿದ ಬ್ಯಾಂಕ್ ನಾಯಕರಿಗೆ ಗೌರವವನ್ನು ನೀಡಲಾಗುವುದು. ಈ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ ಅನ್ನು ಗ್ಲೋಬಲ್ ಫೈನಾನ್ಸ್ 1994ರಿಂದ ಪ್ರತಿ ವರ್ಷ ಪ್ರಕಟಿಸುತ್ತಿದೆ. ಯುರೋಪಿಯನ್ ಯುನಿಯನ್ ಈಸ್ಟರ್ನ್ ಕೆರೆಬಿಯನ್ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಸೆಂಟ್ರಲ್ ಆಫ್ರಿಕನ್ ಸ್ಟೇಟ್ಸ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಆಫ್ರಿಕನ್ ಸ್ಟೇಟ್ ಸೇರಿದಂತೆ ಸರಿಸುಮಾರು 100 ದೇಶ, ಪ್ರದೇಶ, ಜಿಲ್ಲಾ ಕೇಂದ್ರೀಯ ಬ್ಯಾಂಕರ್ ಗವರ್ನರ್ಗಳ ಕಾರ್ಯತಂತ್ರದ ಆಧಾರದ ಮೇಲೆ ಶ್ರೇಯಾಂಕ ನೀಡಲಾಗುತ್ತದೆ.
ಇದನ್ನೂ ಓದಿ: ಸಾಲಗಾರರಿಗೆ ಗುಡ್ ನ್ಯೂಸ್, ಬಡ್ಡಿ ದರದಲ್ಲಿಲ್ಲ ಯಾವುದೇ ಬದಲಾವಣೆ: ರೆಪೋ ರೇಟ್ ಏರಿಕೆ ಮಾಡದಿರಲು RBI ನಿರ್ಧಾರ