ರಾಜೀವ್ ಗಾಂಧಿ 33ನೇ ಪುಣ್ಯತಿಥಿ: ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್ ವರಿಷ್ಠರು, ಪ್ರಧಾನಿ ಮೋದಿಯಿಂದಲೂ ನಮನ - Rajiv Gandhi 33rd Death Anniversary - RAJIV GANDHI 33RD DEATH ANNIVERSARY
ಮಂಗಳವಾರ ನವದೆಹಲಿಯ ವೀರಭೂಮಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿಯ ನಿಮಿತ್ತ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಶ್ರದ್ಧಾಂಜಲಿ ಸಲ್ಲಿಸಿದರು.
Published : May 21, 2024, 2:42 PM IST
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿ ನಿಮಿತ್ತ ಮಂಗಳವಾರ (ಮೇ 21) ನವದೆಹಲಿಯ ವೀರಭೂಮಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. "ನಮ್ಮ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಜಿ ಪುಣ್ಯತಿಥಿ ನಿಮಿತ್ತ, ಅವರಿಗೆ ನನ್ನ ಶ್ರದ್ಧಾಂಜಲಿ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪಿ. ಚಿದಂಬರಂ ಮತ್ತು ಸಚಿನ್ ಪೈಲಟ್ ಅವರಂತಹ ಇತರ ಕಾಂಗ್ರೆಸ್ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಮಾಜಿ ಪ್ರಧಾನಿಗೆ ಗೌರವ ನಮನ ಸಲ್ಲಿಸಿದರು. ಇಂದಿರಾ ಮತ್ತು ಫಿರೋಜ್ ಗಾಂಧಿ ಅವರ ಹಿರಿಯ ಮಗ ರಾಜೀವ್ ಗಾಂಧಿ ಅವರು 1984 ರಿಂದ 1989 ರವರೆಗೆ ಭಾರತದ 7ನೇ ಪ್ರಧಾನಿಯಾಗಿದ್ದರು. ಅವರನ್ನು 1991ರಲ್ಲಿ ಶ್ರೀಪೆರಂಬದೂರಿನಲ್ಲಿ ಎಲ್‌ಟಿಟಿಇ ಹತ್ಯೆ ಮಾಡಿತ್ತು.
1984ರಲ್ಲಿ ತಮ್ಮ ತಾಯಿ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ರಾಜೀವ್ ಗಾಂಧಿಯವರು ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಅಕ್ಟೋಬರ್ 1984ರಲ್ಲಿ ಅಧಿಕಾರ ವಹಿಸಿಕೊಂಡ ಅವರು, 40ನೇ ವಯಸ್ಸಿನಲ್ಲಿ ಭಾರತದ ಕಿರಿಯ ಪ್ರಧಾನಿಯಾಗಿದ್ದರು. ರಾಜೀವ್ ಗಾಂಧಿ ಅವರು ಡಿಸೆಂಬರ್ 2, 1989 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
1944ರ ಆಗಸ್ಟ್ 20ರಂದು ಜನಿಸಿದ ರಾಜೀವ್ ಗಾಂಧಿ ಅವರು, ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು. ರಾಜೀವ್ ಗಾಂಧಿ ಅವರ ಹತ್ಯೆಯ ಹಿನ್ನೆಲೆ, ಭಾರತೀಯರು ಈ ದಿನಾಂಕದಂದು ವಾರ್ಷಿಕವಾಗಿ ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಣೆ ಮಾಡುತ್ತಾರೆ.