ಚಂದೌಲಿ (ಉತ್ತರ ಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಇಂದು (ಶುಕ್ರವಾರ) ಉತ್ತರ ಪ್ರದೇಶಕ್ಕೆ ತಲುಪಲಿದೆ. ಚಂದೌಲಿ ಜಿಲ್ಲೆಯ ನೌಬತ್‌ಪುರ ಗಡಿಯಿಂದ ಉತ್ತರ ಪ್ರದೇಶವನ್ನು ಪ್ರವೇಶಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಹುಲ್ ಗಾಂಧಿಯ ಜೊತೆಗೆ ಭಾರತ್ ಜೋಡೋ ನ್ಯಾಯ್ ಯಾತ್ರೆ'ಯಲ್ಲಿ ಪಾಲ್ಗೊಲಿದ್ದಾರೆ.
ಇನ್ನು ಅಪ್ನಾ ದಳ (ಕಾಮೆರವಾಡಿ) ನಾಯಕಿ ಪಲ್ಲವಿ ಪಟೇಲ್ ಕೂಡ ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. 2022 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಟಿಕೆಟ್‌ನಲ್ಲಿ ಗೆದ್ದಿರುವ ಪಲ್ಲವಿ, ರಾಜ್ಯಸಭೆಗೆ ಎಸ್‌ಪಿ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಮಾತನಾಡಿ, "ರಾಹುಲ್ ಗಾಂಧಿ ಅವರು ನೌಬತ್‌ಪುರ ಗಡಿಯ ಮೂಲಕ ಉತ್ತರ ಪ್ರದೇಶಕ್ಕೆ ಪ್ರವೇಶಿಸುವ ಮೊದಲು, ಪ್ರಿಯಾಂಕಾ ಗಾಂಧಿ ಅವರು 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯನ್ನು ಸ್ವಾಗತಿಸಲು ಯುಪಿಯ ಚಂದೌಲಿ ತಲುಪಲಿದ್ದಾರೆ. ಇವರಿಬ್ಬರು ಸೈಯ್ಯದ್‌ರಾಜ ಟೌನ್‌ಶಿಪ್‌ನಲ್ಲಿರುವ ನ್ಯಾಷನಲ್ ಇಂಟರ್ ಕಾಲೇಜಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ನಂತರ, ಶಹೀದ್ ಸ್ಥಳದವರೆಗೆ ಮೆರವಣಿಗೆ ನಡೆಸಲಿದ್ದಾರೆ. ಚಂದೌಲಿಯಲ್ಲಿ ರಾತ್ರಿ ವಿಶ್ರಾಂತಿಯ ನಂತರ, ಈ ಯಾತ್ರೆಯು ಮೆರವಣಿಗೆ ಶನಿವಾರ ವಾರಾಣಸಿಯನ್ನು ಪ್ರವೇಶಿಸಲಿದೆ" ಎಂದು ಅವರು ತಿಳಿಸಿದರು.
ಭಾರತ್ ಜೋಡೋ ನ್ಯಾಯ್ ಯಾತ್ರೆ ನಾಳೆ ವಾರಾಣಸಿಗೆ: ರಾಹುಲ್ ಗಾಂಧಿ ಶನಿವಾರ ಗೋಲ್ಗಡ್ಡಾ ಕ್ರಾಸಿಂಗ್‌ನಿಂದ ವಾರಾಣಸಿಯಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ವಿಶೇಶ್ವರಗಂಜ್ ಮಾರುಕಟ್ಟೆ ಮತ್ತು ಮೈದಾಗಿನ್ ಕ್ರಾಸಿಂಗ್ ಮೂಲಕ ಹಾದುಹೋದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ತಲುಪಲಿದ್ದಾರೆ. ನಂತರ ಅವರು ಗೋಡೋಲಿಯಾ ಕ್ರಾಸಿಂಗ್ ತಲುಪಿ, ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ರಾಹುಲ್ ಗಾಂಧಿ ಭದೋಹಿಗೆ ತೆರಳಲಿದ್ದಾರೆ ಎಂದು ಅಜಯ್ ರೈ ಅವರು ಮಾಹಿತಿ ನೀಡಿದರು.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ: ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ''ಚೀನಾದಿಂದ ಮೊಬೈಲ್ ಫೋನ್ ತಯಾರಿಸುವ ಮೂಲಕ ಪ್ರಧಾನಿ ಮೋದಿ ಭಾರತದ ಎಂಟರಿಂದ ಹತ್ತು ಕೈಗಾರಿಕೋದ್ಯಮಿ ಸ್ನೇಹಿತರನ್ನು ಕೋಟ್ಯಧಿಪತಿಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಚೀನಾದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. ಆದರೆ, ಭಾರತದಲ್ಲಿ ನಿರುದ್ಯೋಗ ಏರಿಕೆಯಾಗುತ್ತಿದೆ'' ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
''ಬಿಜೆಪಿ ನಾಯಕರು ತಮ್ಮ ತಮ್ಮಲ್ಲೇ ಜಗಳ ಮಾಡಿಕೊಳ್ಳುವ ರಾಜಕೀಯ ಮಾಡುತ್ತಿದೆ. ಇಂದು ದೇಶದಲ್ಲಿ ದ್ವೇಷದ ಜೊತೆಗೆ ಅನ್ಯಾಯದ ವಾತಾವರಣ ನಿರ್ಮಾಣವಾಗಿದೆ. ಯುವಕರನ್ನು ಮೂರ್ಖರನ್ನಾಗಿಸಿ ಸರ್ಕಾರ ನಡೆಸಲು ಸಾಧ್ಯವಿಲ್ಲ. ಒಂದರ ಹಿಂದೆ ಒಂದರಂತೆ ಸುಳ್ಳು ಭರವಸೆಗಳನ್ನು ಕೊಡಲಾಗಿದ್ದು, ಸತ್ಯ ಹೊರಬರಲಿದೆ ಎಂದ ಅವರು, ಸರ್ಕಾರವು ದೇಶದಲ್ಲಿ ಕೋಟ್ಯಂತರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಮೋದಿ ತನ್ನ ಶ್ರೀಮಂತ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಮಾತ್ರ ಲಾಭ ಮಾಡಿದ್ದಾರೆ'' ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ಬಣವೇ 'ನಿಜವಾದ ಎನ್‌ಸಿಪಿ': ಮಹಾರಾಷ್ಟ್ರ ಸ್ಪೀಕರ್ ತೀರ್ಪು