ನವದೆಹಲಿ : ಪ್ರತಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟದ ವಿರುದ್ಧ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಮಾವೇಶದ ಎರಡನೇ ದಿನವಾದ ಭಾನುವಾರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಬಿಜೆಪಿ ದೇಶ್ ಕಿ ಆಶಾ, ವಿಪಕ್ಷ್ ಕಿ ಹತಾಶಾ" ಎಂಬ ರಾಜಕೀಯ ನಿರ್ಣಯ ಪ್ರಸ್ತಾಪಿಸಿದ್ದಾರೆ. ಅಮಿತ್ ಶಾ ಮಂಡಿಸಿದ ರಾಜಕೀಯ ನಿರ್ಣಯವನ್ನು ಕೇಂದ್ರ ಸಚಿವ ಅರ್ಜುನ್ ಮುಂಡಾ ಅನುಮೋದಿಸಿದರು.
ಏಳು ಪುಟಗಳ ರಾಜಕೀಯ ಪ್ರಸ್ತಾಪದಲ್ಲಿ, ಕಾಂಗ್ರೆಸ್ ಅಸ್ಥಿರತೆಯ ಮೂಲಬೇರು ಎಂದು ಬಿಜೆಪಿ ಆರೋಪಿಸಿದೆ. "ಕಾಂಗ್ರೆಸ್ ಪಕ್ಷವು ಕೆಟ್ಟ, ಕುತಂತ್ರಿ ಪಕ್ಷವಾಗಿದೆ. ಕಾಂಗ್ರೆಸ್ ಬಡವರ ವಿರೋಧಿಯಾಗಿದ್ದು, ಐಎನ್ಡಿಐಎ ಸಂಯೋಜನೆಯೇ ವಿಚಿತ್ರವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್, ವಿಭಜಕ ರಾಜಕೀಯದ ಕಾಂಗ್ರೆಸ್, ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ನಡೆಸುವ ಕಾಂಗ್ರೆಸ್ ಮತ್ತು ಪ್ರತಿಯೊಂದು ಪ್ರಗತಿಪರ ಹೆಜ್ಜೆಯನ್ನು ವಿರೋಧಿಸಿದೆ" ಎಂದು ಬಿಜೆಪಿ ಆರೋಪಿಸಿದೆ.
"ದೇಶದ ಸಾಂವಿಧಾನಿಕ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ಕಾಂಗ್ರೆಸ್ ನ ಅಪ್ರಬುದ್ಧ ಮತ್ತು ಬೇಜವಾಬ್ದಾರಿಯುತ ರಾಜಕೀಯ ಮತ್ತು ಐಎನ್ಡಿಐಎ ಬಣದ ಹಿಂಸಾಚಾರ ಮತ್ತು ಅರಾಜಕತೆಯ ರಾಜಕೀಯವು ಕಾಂಗ್ರೆಸ್ನ ಅವನತಿಗೆ ಕಾರಣವಾಗಲಿದೆ" ಎಂದು ಬಿಜೆಪಿ ಹೇಳಿದೆ.
"ದೇಶದಲ್ಲಿ ಅರಾಜಕತೆ ಮತ್ತು ಹಿಂಸಾಚಾರದ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಅದರ ಬಹುತೇಕ ಮಿತ್ರಪಕ್ಷಗಳು ಒಂದಾಗಿವೆ. ಇತ್ತೀಚೆಗೆ, ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುವ ಮೂಲಕ ಟಿಎಂಸಿ ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕೇರಳದಲ್ಲಿ ಸಿಪಿಐ, ಸಿಪಿಎಂ ಮತ್ತು ಅವರ ಮಿತ್ರ ಪಕ್ಷಗಳು ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆಸುತ್ತಿವೆ ಮತ್ತು ಅವರನ್ನು ಕೊಲೆಗೈಯುತ್ತಿವೆ" ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
"ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳದ ಕಾಲದಲ್ಲಿ ಇದ್ದ ಜಂಗಲ್ ರಾಜ್ ಆಡಳಿತವನ್ನು ದೇಶ ಇನ್ನೂ ಮರೆತಿಲ್ಲ. ಬುಡಕಟ್ಟು ಮಹಿಳೆಯರು, ರೈತರು ಮತ್ತು ಸಾಮಾನ್ಯ ಜನ ಅನೇಕ ರೀತಿಯ ಕಿರುಕುಳ ಮತ್ತು ಚಿತ್ರಹಿಂಸೆಯನ್ನು ಸಹಿಸಬೇಕಾಯಿತು. ಚಳವಳಿಯ ಹೆಸರಿನಲ್ಲಿ ವಿಭಜಕ ಶಕ್ತಿಗಳು ಅರಾಜಕತೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ" ಎಂದು ಬಿಜೆಪಿ ಆರೋಪಿಸಿದೆ.
"ಆಂದೋಲನದ ಹೆಸರಿನಲ್ಲಿ, ದೇಶದಲ್ಲಿ ವಿಭಜಕ ಶಕ್ತಿಗಳಿಂದ ಅರಾಜಕತೆಯ ವಾತಾವರಣ ಸೃಷ್ಟಿಸುವ ಪ್ರಯತ್ನಗಳು ನಡೆದಾಗ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬೆಂಕಿಗೆ ತುಪ್ಪ ಸುರಿಯಲು ಮೊದಲು ಅಲ್ಲಿಗೆ ತಲುಪುತ್ತವೆ. ಈ ರೀತಿಯ ನಕಾರಾತ್ಮಕ ರಾಜಕೀಯದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ" ಎಂದು ಅದು ಹೇಳಿದೆ.
"ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಬೇಕೆಂಬ ಏಕೈಕ ಉದ್ದೇಶದಿಂದ ಐಎನ್ಡಿಐಎ ಮೈತ್ರಿಕೂಟವನ್ನು ರಚಿಸಲಾಗಿದೆ; ಹೀಗಾಗಿ ಈ ಮೈತ್ರಿಗೆ ಯಾವುದೇ ಸೈದ್ಧಾಂತಿಕ ಆಧಾರವಿಲ್ಲ. ಇದರಲ್ಲಿ ಭಾಗಿಯಾಗಿರುವ ವಿವಿಧ ಪಕ್ಷಗಳು ಪರಸ್ಪರರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತವೆ ಮತ್ತು ಅನೇಕ ರಾಜ್ಯಗಳಲ್ಲಿ ಅವರು ಪರಸ್ಪರ ವಿರೋಧಿಗಳಾಗಿದ್ದಾರೆ. ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದರೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷ ಪರಸ್ಪರರ ವಿರುದ್ಧ ಸ್ಪರ್ಧಿಸುತ್ತವೆ" ಎಂದು ಬಿಜೆಪಿ ನಿರ್ಣಯ ಹೇಳಿದೆ.
ಇದನ್ನೂ ಓದಿ : ದೆಹಲಿ ತಲುಪಿದ ಕಾಂಗ್ರೆಸ್ ಕಟ್ಟಾಳು ಕಮಲ್ ನಾಥ್; ಬಿಜೆಪಿ ಸೇರುವ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ