ನವದೆಹಲಿ: ಅತ್ಯುತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ರಾಜ್ಯ ರಾಜಧಾನಿಯಲ್ಲಿರುವ ಐಐಎಸ್‌ಸಿಯು 'ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ'ವಾಗಿ ಹೊರಹೊಮ್ಮಿದೆ. ಸತತ 9ನೇ ವರ್ಷವೂ ಈ ಗೌರವ ಕಾಯ್ದುಕೊಂಡಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) 2024ರ ಸಾಲಿನ ಶ್ರೇಯಾಂಕ ಪಟ್ಟಿಯನ್ನು ಇಂದು (ಸೋಮವಾರ) ಬಿಡುಗಡೆ ಮಾಡಿದ್ದು, ಬೆಂಗಳೂರು ವಿವಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಇದರ ನಂತರ ವಿವಾದ, ವಿದ್ಯಾರ್ಥಿ ಪ್ರತಿಭಟನೆಗಳಿಂದ ಗುರುತಿಸಿಕೊಂಡಿರುವ ದೆಹಲಿಯ ಜವಾಹರ್ಲಾಲ್ ನೆಹರೂ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ನಂತರದ ಸ್ಥಾನದಲ್ಲಿವೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಲ್ಲಿನ ಭಾರತ ಮಂಟಪದಲ್ಲಿ ದೇಶದ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದರು. ಒಟ್ಟಾರೆ ವಿಭಾಗದಲ್ಲಿ ಐಐಟಿ ಮದ್ರಾಸ್ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರಿನ ಐಐಎಸ್ಸಿಗೆ ಎರಡನೇ ಸ್ಥಾನ, ಐಐಟಿ ಬಾಂಬೆ ಮೂರನೇ ಸ್ಥಾನ ಪಡೆದುಕೊಂಡಿದೆ.
ಮದ್ರಾಸ್ ಐಐಟಿಗೆ ಮೊದಲ ಶ್ರೇಯ: ಕಳೆದ 6 ವರ್ಷಗಳಿಂದ ಐಐಟಿ-ಮದ್ರಾಸ್ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಎಂಬ ಶ್ರೇಯಾಂಕವನ್ನು ಕಾಯ್ದುಕೊಂಡರೆ, ಆಡಳಿತ(ಮ್ಯಾನೇಜ್‌ಮೆಂಟ್) ವಿಭಾಗದಲ್ಲಿ ಐಐಎಂ-ಅಹಮದಾಬಾದ್, ಬೆಂಗಳೂರು ಮತ್ತು ಕೋಲ್ಕತ್ತಾ ಟಾಪ್ ಶಿಕ್ಷಣ ಸಂಸ್ಥೆಗಳಾಗಿವೆ. ಎಂಜಿನಿಯರಿಂಗ್ ವಿಭಾಗದಲ್ಲೂ ಐಐಟಿ ಮದ್ರಾಸ್ ಮೊದಲ ಸ್ಥಾನದಲ್ಲಿದ್ದರೆ, ಐಐಟಿ ದೆಹಲಿ, ಐಐಟಿ ಬಾಂಬೆ ನಂತರದ ಸ್ಥಾನದಲ್ಲಿವೆ.
ಎಂಜಿನಿಯರಿಂಗ್ ವಿಭಾಗದಲ್ಲಿ ದೆಹಲಿ ಏಮ್ಸ್ ಸಂಸ್ಥೆಯು ಮೊದಲ ಶ್ರೇಯಾಂಕ ಪಡೆದಿದೆ. ಎರಡನೇ ಸ್ಥಾನದಲ್ಲಿ ಚಂಡೀಗಢದ ಪಿಜಿಐಎಂಇಆರ್, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಮೂರನೇ ಕ್ರಮಾಂಕದಲ್ಲಿದೆ.
ಎನ್‌ಐಆರ್‌ಎಫ್ ಪಟ್ಟಿಯಲ್ಲಿ ವಿಶ್ವವಿದ್ಯಾನಿಲಯಗಳು, ವೈದ್ಯಕೀಯ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಕಾನೂನು, ವಾಸ್ತುಶಿಲ್ಪ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಫಾರ್ಮಸಿ, ದಂತ ವೈದ್ಯಕೀಯ, ಕೃಷಿ ಮತ್ತು ಸಂಬಂಧಿತ ವಲಯಗಳು, ನಾವೀನ್ಯತೆ, ರಾಜ್ಯ ವಿಶ್ವವಿದ್ಯಾಲಯಗಳು, ಮುಕ್ತ ವಿಶ್ವವಿದ್ಯಾಲಯಗಳು, ಕೌಶಲ್ಯ ವಿಶ್ವವಿದ್ಯಾಲಯಗಳು ಮತ್ತು ಹೊಸದಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸೇರಿ 16 ವಿಭಾಗಗಳಲ್ಲಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಯುಜಿಸಿ-ನೆಟ್ ಪರೀಕ್ಷೆ ರದ್ದು ಕ್ರಮ ತೆರವು ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ - UGC NET Exam