ಮುಂಬೈ(ಮಹಾರಾಷ್ಟ್ರ): ಬದ್ಲಾಪುರದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ನರ್ಸರಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಶಾಲೆ ನಿರ್ವಹಣೆಯ ಉಸ್ತುವಾರಿಗೆ ಮಹಾರಾಷ್ಟ್ರ ಸರ್ಕಾರ ಇಂದು ಆಡಳಿತಗಾರರನ್ನು ನೇಮಿಸಿದೆ ಎಂದು ಕೇಂದ್ರ ಸಚಿವ ದೀಪಕ್ ಕೆಸರ್ಕರ್ ತಿಳಿಸಿದ್ದಾರೆ.
ಶಾಲಾ ನಿರ್ವಹಣೆಯನ್ನು ನಾವು ಪ್ರತ್ಯೇಕ ಆಡಳಿತಕ್ಕೆ ವಹಿಸಿದ್ದೇವೆ. ಆಡಳಿತಗಾರರು ಇಂದು ಅಥವಾ ನಾಳೆಯೊಳಗೆ ಅಧಿಕಾರ ವಹಿಸಿಕೊಳ್ಳುವರು ಎಂದು ಅವರು ಮಾಹಿತಿ ನೀಡಿದ್ದಾರೆ.
ಬದ್ಲಾಪುರ ರೈಲ್ವೆ ನಿಲ್ದಾಣ ಸೇರಿದಂತೆ ಹಲವೆಡೆ ನಡೆದ ಪ್ರತಿಭಟನೆಯ ವೇಳೆ ಕಲ್ಲು ತೂರಾಟದಲ್ಲಿ 17 ನಗರ ಪೊಲೀಸ್ ಸಿಬ್ಬಂದಿ ಮತ್ತು 8 ರೈಲ್ವೆ ಪೊಲೀಸರು ಗಾಯಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಸದ್ಯ ನಗರ ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಿಸಿಟಿವಿ ಪರಿಶೀಲಿಸಿದ ಬಳಿಕ ಕಲ್ಲು ತೂರಾಟ ಸೇರಿದಂತೆ ಇತರೆ ಅಪರಾಧಗಳಲ್ಲಿ ಭಾಗಿಯಾದ 40 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರು ಶಾಲಾ ಗೇಟ್, ಕಿಟಕಿ, ಬೆಂಚ್ ಮತ್ತು ಬಾಗಿಲುಗಳನ್ನು ಮುರಿದು ಭಾರೀ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: 'ಲಡ್ಕಿ ಬೆಹನ್ ಯೋಜನೆಯ ₹1,500 ಬೇಡ, ಸುರಕ್ಷತೆ ಬೇಕು': ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ