ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ 23 ವರ್ಷದ ಮೃತ ಯುವಕನಿಗೆ ನಿಪಾಹ್ ವೈರಸ್ ಸೋಂಕು ತಗುಲಿತ್ತು ಎಂದು ಪುಣೆ ವೈರಾಲಜಿ ಇನ್ ಸ್ಟಿಟ್ಯೂಟ್ ದೃಢಪಡಿಸಿದೆ. ಶಂಕಿತ ನಿಪಾಹ್ ಸೋಂಕಿನಿಂದ ಸಾವನ್ನಪ್ಪಿದ ಯುವಕನ ಸ್ಯಾಂಪಲ್ ಪರೀಕ್ಷೆಗಳು ಪಾಸಿಟಿವ್ ಬಂದಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಮೃತ ಯುವಕನೊಂದಿಗೆ ನೇರ ಸಂಪರ್ಕಕ್ಕೆ ಬಂದ 151 ಜನರ ಪಟ್ಟಿಯನ್ನು ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದೆ. ಈ ಸಂಪರ್ಕ ಪಟ್ಟಿಯಲ್ಲಿನ ಮೂವರಲ್ಲಿ ವೈರಸ್ ಲಕ್ಷಣಗಳು ಕಂಡುಬಂದಿವೆ ಎಂದು ಇಲಾಖೆ ತಿಳಿಸಿದೆ.
ಮೃತನನ್ನು ಬೆಂಗಳೂರಿನ 23 ವರ್ಷದ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ವಂಡೂರಿನ ನಡುವತ್ ಬಳಿಯ ಚೆಂಬರಂ ನಿವಾಸಿ. ಇವರು ಪೆರಿಂಥಲ್ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಪ್ರಾಥಮಿಕ ಪ್ರಯೋಗಾಲಯ ಪರೀಕ್ಷೆಯಲ್ಲಿ ನಿಪಾಹ್ ಪಾಸಿಟಿವ್ ಬಂದಿದ್ದು, ಪುಣೆ ವೈರಾಲಜಿ ಲ್ಯಾಬ್ಕೂಡ ಸ್ಯಾಂಪಲ್ಗಳನ್ನು ನಿಪಾಹ್ ಪಾಸಿಟಿವ್ ಎಂದು ದೃಢಪಡಿಸಿದ್ದರಿಂದ, ಆರೋಗ್ಯ ಇಲಾಖೆಯು ಪ್ರೋಟೋಕಾಲ್ಗಳನ್ನು ಅನುಸರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ತಿರುವಲಿ ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಪ್ರಸ್ತುತ ಸಮುದಾಯ ಆರೋಗ್ಯದ ಪರಿಸ್ಥಿತಿಯ ಕುರಿತು ಸಭೆ ನಡೆಸಿದರು. ತಿರುವಲಿ ಪಂಚಾಯತ್ ವ್ಯಾಪ್ತಿಯಲ್ಲಿ ಹೆಲ್ತ್ ಅಲರ್ಟ್ ಘೋಷಿಸಲಾಗಿದ್ದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಾಲಿಗೆ ಗಾಯ ಮಾಡಿಕೊಂಡಿದ್ದ ಮೃತ ಯುವಕ ಇತ್ತೀಚೆಗೆ ಬೆಂಗಳೂರಿನಿಂದ ಬಂದಿದ್ದ ಎಂದು ಮಲಪ್ಪುರಂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಐಎಎನ್ಎಸ್ಗೆ ತಿಳಿಸಿದ್ದಾರೆ. ನಂತರ ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಆತ ನಡುವತ್ನ ಕ್ಲಿನಿಕ್ಗೆ ಮತ್ತು ಮಲಪ್ಪುರಂನ ವಂಡೂರ್ ನಲ್ಲಿರುವ ಮತ್ತೊಂದು ಕ್ಲಿನಿಕ್ಗೆ ಭೇಟಿ ನೀಡಿದ್ದ. ಯುವಕ ಭಾನುವಾರ ನಿಧನರಾದ ನಂತರ ಆತನ ರಕ್ತದ ಮಾದರಿಗಳನ್ನು ನಿಪಾಹ್ ವೈರಸ್ ಪರೀಕ್ಷೆಗಾಗಿ ಪುಣೆ ವೈರಾಲಜಿ ಲ್ಯಾಬ್ಗೆ ಕಳುಹಿಸಲಾಗಿತ್ತು.
ಜೀವ ಉಳಿಸುವ ಪ್ರಯತ್ನವಾಗಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯು ಆಸ್ಟ್ರೇಲಿಯಾದಿಂದ ಖರೀದಿಸಿದ ಮೊನೊಕ್ಲೋನಲ್ ಪ್ರತಿಕಾಯವನ್ನು ವೈದ್ಯರು ಆತನಿಗೆ ಇಂಜೆಕ್ಷನ್ ಮೂಲಕ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತ ಪಟ್ಟಿದ್ದಾನೆ.
ಜುಲೈ 21, 2024 ರಂದು ಕೇರಳದ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ನಿಪಾಹ್ ವೈರಸ್ಗೆ ಬಲಿಯಾಗಿದ್ದ. ಬಾವಲಿಗಳಿಂದ ಇತರ ಪ್ರಾಣಿಗಳಿಗೆ ಹಾಗೂ ಅವುಗಳಿಂದ ಈ ವೈರಸ್ ಮನುಷ್ಯರಿಗೆ ಹರಡುತ್ತದೆ. 2018 ರಲ್ಲಿ, ನಿಪಾಹ್ ವೈರಸ್ ಅಲೆಯಿಂದ 18 ಜನರು ಸಾವನ್ನಪ್ಪಿದ್ದರು. ಇದು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಿಪಾಹ್ ಅಲೆಯಾಗಿತ್ತು.
ಇದನ್ನೂ ಓದಿ : ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಮದ್ಯ ನಿಷೇಧ ತಕ್ಷಣ ಕೊನೆಗಾಣಿಸುವೆ: ಪ್ರಶಾಂತ್ ಕಿಶೋರ್ - BIHAR LIQUOR BAN