ನವದೆಹಲಿ: ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2,100 ರೂ. ನೀಡುವುದಾಗಿ ಎಎಪಿ ಘೋಷಣೆ ಮಾಡಿದ ಬಳಿಕ ಬಿಜೆಪಿ ಆತಂಕಕ್ಕೆ ಒಳಗಾಗಿದ್ದು, ಸೋಲುವ ಭೀತಿಯಿಂದ ಇದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಮಹಿಳೆಯರಿಗೆ ಮಾಸಿಕ ಹಣ ನೀಡುವುದಾಗಿ ಚುನಾವಣಾ ಪೂರ್ವವಾಗಿ ಎಎಪಿ ಘೋಷಿಸಿರುವ ಮಹಿಳಾ ಸಮ್ಮಾನ್ ಯೋಜನೆ ನಕಲಿಯಾಗಿದ್ದು, ಈ ಯೋಜನೆ ಮೂಲಕ ಮಹಿಳೆಯರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ತನಿಖೆಗೆ ಅನುಮತಿ ನೀಡಿರುವ ಲೆಫ್ಟಿನೆಂಟ್ ಗವರ್ನರ್ ಆದೇಶದಲ್ಲಿ ಹುರುಳಿಲ್ಲ ಎಂದು ಟೀಕಿಸಿದರು.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ದೆಹಲಿಯಲ್ಲಿನ ಎಲ್ಲಾ ಅರ್ಹ ಮಹಿಳೆಯರಿಗೆ 2,100 ರೂ. ಹಣ ನೀಡುವುದಾಗಿ ಘೋಷಿಸಿದ್ದೇವೆ. ಸಂಜೀವಿನಿ ಯೋಜನೆ ಅಡಿಯಲ್ಲೂ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದೇವೆ. ಅವರು ಏನನ್ನು ತನಿಖೆ ಮಾಡುತ್ತಾರೆ ಎಂದು ಕೇಳಿದರು.
ಫೆಬ್ರವರಿಯಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಈ ಯೋಜನೆಗಳ ಮೂಲಕ ಬಿಜೆಪಿ ಸೋಲು ಸಾಧ್ಯತೆ ಇದೆ. ಈ ಹಿನ್ನಲೆ ಇದನ್ನು ನಿಲ್ಲಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಆದೇಶ: ಮಹಿಳಾ ಸಮ್ಮಾನ್ ಯೋಜನೆ ಹೆಸರಿನಲ್ಲಿ ಮಹಿಳೆಯರ ಖಾಸಗಿ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂಬ ಆರೋಪದ ಮೇಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ತನಿಖೆಗೆ ಆದೇಶಿಸಿದ್ದಾರೆ.
ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚುನಾವಣೆಗೆ ಮುನ್ನ ಈ ರೀತಿ ಪ್ರಚಾರ ನಡೆಸಲಾಗುತ್ತಿದೆ ಎಂಬ ವಿಚಾರವನ್ನು ಭಾರತೀಯ ಚುನಾವಣಾ ಆಯೋಗ ಮತ್ತು ಚುನಾವಣಾಧಿಕಾರಿಗಳ ಮುಂದೆ ತರಬೇಕು.
ದೆಹಲಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ರಾಜ್ ನಿವಾಸ್ನಲ್ಲಿ ಇತ್ತೀಚೆಗೆ ಎಲ್ಜಿ ವಿಕೆ ಸಕ್ಸೆನಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಎಲ್ಜಿ ವಿಕೆ ಸಕ್ಸೆನಾ ಈ ಆದೇಶ ನೀಡಿದ್ದಾರೆ.
ಸಹಿ ಸಂಗ್ರಹಿಸುತ್ತಿರುವ ಎಎಪಿ ಕಾರ್ಯಕರ್ತರು: ಫೆಬ್ರವರಿಯಲ್ಲಿ ನಡೆಯುವ ದೆಹಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದರೆ, ಮಹಿಳಾ ಸಮ್ಮಾನ್ ಯೋಜನೆ ಮೂಲಕ ಮಾಸಿಕ 2,100 ರೂ. ಹಣವನ್ನು ಅರ್ಹ ಮಹಿಳೆಯರಿಗೆ ನೀಡಲಾಗುವುದು ಎಂದು ಎಎಪಿ ಚುನಾವಣಾ ಪೂರ್ವವಾಗಿ ಘೋಷಿಸಿದೆ.
ಇದಕ್ಕಾಗಿ ಎಎಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ, ಮಹಿಳೆಯರನ್ನು ಭೇಟಿಯಾಗಿ ಅವರಿಂದ ಅರ್ಜಿಗೆ ಸಹಿ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಬಿಆರ್ಎಸ್ ನಾಯಕ ಕೆಟಿಆರ್ಗೆ ಇಡಿ ಸಮನ್ಸ್