ಕಾನ್ಪುರ(ಉತ್ತರಪ್ರದೇಶ): ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತೊಬ್ಬ ಉದ್ಯಮಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನ್ಪುರದ ನಾಯಾಗಂಜ್‌ನ ಬನ್ಶಿಧರ್ ತಂಬಾಕು ಕಂಪನಿಯ ಮಾಲೀಕ ಮುನ್ನಾ ಮಿಶ್ರಾ ಎಂಬವರ ದೆಹಲಿ ಮನೆಯಲ್ಲಿ 60 ಕೋಟಿ ರೂಪಾಯಿ ಮೌಲ್ಯದ ಕಾರುಗಳು, ವಾಚ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ದಿನಗಳಿಂದ ಉದ್ಯಮಿಗೆ ಸಂಬಂಧಿಸಿದ ಸ್ಥಳಗಳ ಶೋಧ ನಡೆಸುತ್ತಿರುವ ಅಧಿಕಾರಿಗಳಿಗೆ ಬಗೆದಷ್ಟೂ ಸಂಪತ್ತು ಗೋಚರವಾಗುತ್ತಿದೆ. ಮೂರನೇ ದಿನದ ದಾಳಿಯಲ್ಲಿ ಮನೆಯಲ್ಲಿ ಸುಮಾರು 2.5 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ದುಬಾರಿ ವಾಚ್‌ಗಳು ಸಿಕ್ಕಿವೆ. ಇದೇ ವೇಳೆ ಬಹುಕೋಟಿ ರೂಪಾಯಿಗಳ ತೆರಿಗೆ ವಂಚನೆಯೂ ಬೆಳಕಿಗೆ ಬಂದಿದೆ.
ತೆರಿಗೆ ವಂಚನೆ ಪ್ರಕರಣದಲ್ಲಿ ಉತ್ತರಪ್ರದೇಶದ ಕಾನ್ಪುರ, ದೆಹಲಿ ಸೇರಿದಂತೆ ವಿವಿಧೆಡೆ ಉದ್ಯಮಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ದುಬಾರಿ ಕಾರುಗಳು, ವಾಚ್‌ಗಳು, ಕೆಲವು ಮಹತ್ವದ ದಾಖಲೆಗಳೂ ಪತ್ತೆಯಾಗಿದ್ದು, ಶೋಧ ಮುಂದುವರಿದಿದೆ ಎಂದು ಆದಾಯ ತೆರಿಗೆ ಅಧಿಕಾರಿ ತಿಳಿಸಿದ್ದಾರೆ. ಈ ದಾಳಿಯು ಈಗ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿದೇಶ ಸಂಪರ್ಕ ಬೆಳಕಿಗೆ: ಬನ್ಶಿಧರ್ ತಂಬಾಕು ಕಂಪನಿ ಮಾಲೀಕ ಮುನ್ನಾ ಮಿಶ್ರಾ ಅವರ ವಿದೇಶದ ಸಂಪರ್ಕವೂ ದಾಳಿಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ ಬಳಿ ಕೋಟ್ಯಂತರ ರೂಪಾಯಿ ನಗದು, ದುಬಾರಿ ಬೆಲೆಯ ಕಾರುಗಳು, ಆಭರಣಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಉದ್ಯಮಿ ಮಿಶ್ರಾರಿಗೆ ವಿದೇಶಿ ವ್ಯಕ್ತಿಗಳ ಸಂಪರ್ಕವೂ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಮ್ಮ ತಂಬಾಕು ದಂಧೆಯನ್ನು ವಿದೇಶಕ್ಕೂ ವಿಸ್ತರಿಸಿದ್ದಾರೆಯೇ ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪಿಯೂಷ್ ಜೈನ್ ಕೇಸ್: ಈ ಹಿಂದೆ ತೆರಿಗೆ ವಂಚನೆ ಪ್ರಕರಣದಲ್ಲಿ ಕಾನ್ಪುರದ ಸುಗಂಧ ದ್ರವ್ಯ ಉದ್ಯಮಿ, ಸಮಾಜವಾದ ಪಕ್ಷದ ನಾಯಕ ಪಿಯೂಷ್ ಜೈನ್ ಅವರ ಮನೆಯಿಂದ 250 ಕೋಟಿ ರೂಪಾಯಿ ನಗದು ಪತ್ತೆ ಮಾಡಲಾಗಿತ್ತು. ಇದನ್ನು ಅವರು ಮನೆಯಲ್ಲೇ ಪೇರಿಸಿಟ್ಟಿದ್ದರು. ಇದು ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ತಂಬಾಕು ಉದ್ಯಮಿ ಮುನ್ನಾ ಮಿಶ್ರಾರ ದೆಹಲಿ ಮನೆಯಲ್ಲಿ ಸಿಕ್ಕ ನಗದು ಕಾರು, ವಾಚ್‌ಗಳು ಜನರ ಕುತೂಹಲ ಕೆರಳಿಸಿವೆ. ಜೊತೆಗೆ ಮಿಶ್ರಾ ಅವರ ದಂಧೆ ದೇಶ ಹಾಗೂ ವಿದೇಶಗಳಿಗೆ ಹೇಗೆ ತಲುಪಿತು ಎಂಬುದೂ ಪ್ರಶ್ನೆಯಾಗಿದೆ.
ಇದುವರೆಗೆ ಮುನ್ನಾ ಮಿಶ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಿಶ್ರಾ ಅವರ ಆರೋಗ್ಯ ಸರಿಯಿಲ್ಲ, ಸದ್ಯಕ್ಕೆ ಏನೂ ಮಾತನಾಡಲು ಬಯಸುವುದಿಲ್ಲ ಎಂದು ಅವರ ಕುಟುಂಬಸ್ಥರು ಹೇಳುತ್ತಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ₹257 ಕೋಟಿ, 23 ಕೆಜಿ ಚಿನ್ನದ ಒಡೆಯ.. ಹಳೇ ಸ್ಕೂಟರ್, ರಬ್ಬರ್ ಚಪ್ಪಲಿ ಧರಿಸುತ್ತಿದ್ದ ಪಿಯೂಷ್ ಜೈನ್!