ಇಬ್ರಾಹಿಂಪಟ್ಟಣಂ(ತೆಲಂಗಾಣ): ಮರ್ಯಾದಾ ಹತ್ಯೆಗೆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ನಡುರಸ್ತೆಯಲ್ಲಿ ತಮ್ಮನಿಂದಲೇ ಭೀಕರವಾಗಿ ಕೊಲೆಯಾದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂ ಮಂಡಲ್ನಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಮಹಿಳಾ ಕಾನ್ಸ್ಟೇಬಲ್ ಕರ್ತವ್ಯಕ್ಕೆ ಹೋಗುತ್ತಿದ್ದಾಗ ರಾಯಪೊಲು ಮತ್ತು ಎಂಡ್ಲಾಗುಂಡಾ ಮಾರ್ಗಮಧ್ಯೆ ಈ ಕೊಲೆ ನಡೆಯಿತು.
"ಪೊಲೀಸ್ ಕಾನ್ಸ್ಟೇಬಲ್ ನಾಗಮಣಿ ಅವರು ಇತ್ತೀಚೆಗೆ ವಿಚ್ಛೇದನ ಪಡೆದಿದ್ದು, ಕುಟುಂಬ ಮತ್ತು ಮೊದಲ ಗಂಡನ ಆಕ್ರೋಶದ ನಡುವೆ ಅಂತರ್ಜಾತಿ ವ್ಯಕ್ತಿಯೊಂದಿಗೆ ಮರು ಮದುವೆಯಾಗಿದ್ದರು. ಶ್ರೀಕಾಂತ್ ಎಂಬ ವ್ಯಕ್ತಿಯೊಂದಿಗೆ ದೀರ್ಘ ಕಾಲದಿಂದ ಪ್ರೀತಿಯಲ್ಲಿದ್ದ ಅವರು ಕಳೆದ ತಿಂಗಳು ಆತನೊಂದಿಗೆ ಎರಡನೇ ಮದುವೆಯಾಗಿದ್ದರು. ಇದಾದ ಬಳಿಕ ಅವರನ್ನು ಹಯಾತ್ನಗರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತನ್ನ ಸ್ವಗ್ರಾಮ ರಾಯಪೊಲು ಗ್ರಾಮಕ್ಕೆ ಹೋಗಿದ್ದ ನಾಗಮಣಿ ಸೋಮವಾರ ಕರ್ತವ್ಯಕ್ಕೆ ಮರಳುತ್ತಿದ್ದರು. ಆಕೆಯ ಎರಡನೇ ಮದುವೆಗೆ ವಿರೋಧಿಸಿದ್ದ ಸಹೋದರ ಇದನ್ನು ಸಹಿಸದೇ ಮಚ್ಚಿನಿಂದ ಹಲ್ಲೆಗೈದು ಕೊಲೆ ಮಾಡಿದ್ದಾನೆ" ಎಂದು ಸರ್ಕಲ್ ಇನ್ಸ್ಪೆಕ್ಟರ್ ಸತ್ಯಾನಾರಾಯಣ ಮಾಹಿತಿ ನೀಡಿದರು.
ಶ್ರೀಕಾಂತ್ ಮತ್ತು ನಾಗಮಣಿ ಕಳೆದ ಎಂಟು ವರ್ಷದಿಂದ ಪ್ರೀತಿಸುತ್ತಿದ್ದರು. ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಸೇರಲು ಅವರು ಕೂಡಾ ಬೆಂಬಲಿಸಿದ್ದರು. 2021ರಲ್ಲಿ ನಾಗಮಣಿ ಕಾನ್ಸ್ಟೇಬಲ್ ಹುದ್ದೆ ಪಡೆದರು. ನವೆಂಬರ್ 1ರಂದು ಯಾದಗಿರಿಗುಟ್ಟ ದೇಗುಲದಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು.
ಇದನ್ನೂ ಓದಿ: ಗೋಣಿಚೀಲದಲ್ಲಿ ಬಾಲಕನ ಶವ ಪತ್ತೆ; ಮಾಟ ಮಂತ್ರಕ್ಕೆ ಬಲಿ ಕೊಟ್ಟಿರುವ ಶಂಕೆ