ನವದೆಹಲಿ: ಸಂಸದ ಡಿ ಕೆ ಸುರೇಶ್, ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಬಗ್ಗೆ ನೀಡಿದ ಹೇಳಿಕೆ ವಿಚಾರ ಇಂದು ಸಂಸತ್ನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ಸಂಸದರ ಹೇಳಿಕೆಯನ್ನು ಬಿಜೆಪಿ ಉಭಯ ಸದನಗಳಲ್ಲಿ ಖಂಡಿಸಿತು. ಈ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, 'ದೇಶ ಒಡೆಯುವ' ಬಗ್ಗೆ ಮಾತನಾಡುವವರನ್ನು ಪಕ್ಷ ಸಹಿಸುವುದಿಲ್ಲ ಅಥವಾ ಅವರ ಪರವಾಗಿ ನಿಲ್ಲುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿದರು. ‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶ ಒಂದೇ.. ಸಂಸ್ಕೃತಿ , ಆಚಾರ ವಿಚಾರ ಬೇರೆ ಆದರೂ ನಾವೆಲ್ಲರೂ ಒಂದೇ ಹಾಗೆಯೇ ಉಳಿಯುತ್ತೇವೆ’ ಎಂದರು.
''ಇಂತಹ ಹೇಳಿಕೆ ನೀಡುವವರು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ ದೇಶ ಒಡೆಯುವ ಮಾತನಾಡುವವರನ್ನು ಸಹಿಸಲು ಸಾಧ್ಯವಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಂದಾಗಿದ್ದೇವೆ ಮತ್ತು ಹಾಗೆಯೇ ಇರುತ್ತೇವೆ ಎಂದು ಹೇಳುವ ಮೊದಲ ವ್ಯಕ್ತಿ ನಾನು ಎಂದು ಸ್ಪಷ್ಟನೆ ಕೊಟ್ಟರು.
ಲೋಕಸಭೆಯಲ್ಲೂ ವಿಷಯ ಪ್ರಸ್ತಾಪ: ರಾಜ್ಯಸಭೆ ಅಲ್ಲದೇ ಲೋಕಸಭೆಯಲ್ಲೂ ಡಿಕೆಸು ಹೇಳಿಕೆ ವಿಚಾರ ಪ್ರಸ್ತಾಪ ಆಯಿತು. ಬಿಜೆಪಿ ನಾಯಕ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ವಿಷಯ ಪ್ರಸ್ತಾಪಿಸಿ, ಈ ಹೇಳಿಕೆ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ ಎಂದರು. ಲೋಕಸಭಾ ಸದಸ್ಯರಾಗಿ ಅವರು ಪ್ರಮಾಣವಚನದ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಷಯವನ್ನು ನೈತಿಕ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ ಜೋಶಿ, ಸಂಸದರ ವಿರುದ್ಧ ಕಾಂಗ್ರೆಸ್‌ಗೆ ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು.
ಡಿಕೆ ಸುರೇಶ್ ಹೇಳಿದ್ದೇನು?: ದಕ್ಷಿಣ ಭಾರತಕ್ಕೆ ಪ್ರತಿ ಹಂತದಲ್ಲೂ ಅನ್ಯಾಯ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ನಾವು ಮುಂದಿನ ದಿನಗಳಲ್ಲಿ ಖಂಡಿಸದಿದ್ದರೆ, ಪ್ರತ್ಯೇಕ ರಾಷ್ಟ್ರಕ್ಕೂ ಕೂಡ ಬೇಡಿಕೆ ಇಡಬೇಕಾದ ಅನಿವಾರ್ಯ ಪರಿಸ್ಥಿತಿಯು ನಮ್ಮ ಮೇಲೆ ಹೇರಿಕೆಯಾಗುತ್ತಿದೆ ಎಂದು ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಸದಸ್ಯರೂ ಆಗಿರುವ ಡಿಕೆ ಸುರೇಶ್ ಹೇಳಿದ್ದರು. ಈ ನಡುವೆ ಕರ್ನಾಟಕದಲ್ಲೂ ಡಿಕೆ ಸುರೇಶ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಇದನ್ನು ಓದಿ: ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಡಿ ಕೆ ಸುರೇಶ್ ಈ ರೀತಿ ಹೇಳಿರಬಹುದು: ಸಚಿವ ಸತೀಶ್ ಜಾರಕಿಹೊಳಿ