ನವದೆಹಲಿ: ಭಾರತ ಚುನಾವಣಾ ಆಯೋಗದ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಸೋಮವಾರ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ. ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ ರೂಪಿಸಲಾದ ಹೊಸ ಕಾನೂನಿನಡಿ ಮುಖ್ಯ ಚುನಾವಣಾ ಆಯುಕ್ತರಾಗಿ(ಸಿಇಸಿ) ಆಯ್ಕೆಯಾದ ಮೊದಲಿಗರು.
ಮುಂಬರುವ ಪ್ರಮುಖ ಚುನಾವಣೆಗಳು: ಜ್ಞಾನೇಶ್ ಕುಮಾರ್ 26ನೇ ಸಿಇಸಿಯಾಗಿ ತಮ್ಮ ಅಧಿಕಾರವಧಿಯಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಮತ್ತು 2026ರಲ್ಲಿ ನಡೆಯಲಿರುವ ಕೇರಳ, ಪುದುಚೇರಿ ವಿಧಾನಸಭೆ ಚುನಾವಣೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಅದೇ ರೀತಿ, 2026ರಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಮೇಲ್ವಿಚಾರಣೆಯನ್ನೂ ಮಾಡಲಿದ್ದಾರೆ.
ಈ ಹಿಂದೆ, ಗೃಹ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸಿದ್ದ ಜ್ಞಾನೇಶ್ ಕುಮಾರ್, ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸಾಂವಿಧಾನಿಕ ಸ್ಥಾನಮಾನ 370ನೇ ವಿಧಿ ರದ್ದಾದ ನಂತರದ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಗುರುತರ ಪಾತ್ರ ನಿರ್ವಹಿಸಿದ್ದರು. ಮಾರ್ಚ್ 15, 2024ರಲ್ಲಿ ಇವರು ಕೇಂದ್ರ ಚುನಾವಣಾ ಆಯೋಗದಲ್ಲಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.
ನೇಮಕಾತಿ ಮುಂದೂಡಿ ಎಂದಿದ್ದ ಕಾಂಗ್ರೆಸ್: ಕೇಂದ್ರ ಚುನಾವಣಾ ಆಯೋಗದ ಸಂಯೋಜನೆಯನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಮುಗಿಯುವರೆಗೂ ಚುನಾವಣಾ ಆಯೋಗಕ್ಕೆ ನೂತನ ಮುಖ್ಯಸ್ಥರ ನೇಮಕಾತಿ ಮುಂದೂಡುವಂತೆ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ ಆಯೋಗಕ್ಕೆ ನೂತನ ಮುಖ್ಯಸ್ಥರನ್ನು ನೇಮಿಸಲಾಗಿದೆ. ಕಾಂಗ್ರೆಸ್ ತನ್ನ ಬೇಡಿಕೆಯನ್ನು ನೇಮಕಾತಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.
ಶಿಕ್ಷಣ ಮತ್ತು ಅನುಭವ: ಜ್ಞಾನೇಶ್ ಕುಮಾರ್ 1988ರ ಕೇರಳ ಕೇಡರ್‌ನ IAS ಅಧಿಕಾರಿ. ಐಐಟಿ ಕಾನ್ಪುರದಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪೂರ್ಣಗೊಳಿಸಿರುವ ಇವರು ICFAI ವ್ಯಾವಹಾರಿಕ ಹಣಕಾಸು (Business Finance) ವಿಷಯವನ್ನು ಅಧ್ಯಯನ ಮಾಡಿದ್ದರು. ಭಾರತ ಮತ್ತು ಪರಿಸರಾತ್ಮಕ ಅರ್ಥಶಾಸ್ತ್ರವನ್ನು ಅಮೆರಿಕದ ಹಾರ್ವರ್ಡ್ ವಿವಿಯ HIIDಯಲ್ಲಿ ಅಧ್ಯಯನ ಮಾಡಿದ್ದರು. ಕೇರಳ ಸರ್ಕಾರದಡಿ ಕೆಲಸ ಮಾಡಿರುವ ಇವರು ಎರ್ನಾಕುಲಂನಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿದ್ದರು. ಅಡೂರ್‌ನಲ್ಲಿ ಉಪ ಕಲೆಕ್ಟರ್ ಆಗಿದ್ದರು. ಕೇರಳ ರಾಜ್ಯ ಎಸ್/ಎಸ್‌ಟಿ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಕೊಚ್ಚಿ ಕಾರ್ಪೋರೇಶನ್‌ಗೆ ಮುನ್ಸಿಪಲ್ ಕಮೀಷನರ್ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವಿ. ಕೇರಳ ಸರ್ಕಾರಕ್ಕೆ ಕಾರ್ಯದರ್ಶಿಯಾಗಿದ್ದ ಕುಮಾರ್, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ಹಣಕಾಸು ಸಂಪನ್ಮೂಲ, ತ್ವರಿತಗತಿ ಯೋಜನೆಗಳು ಮತ್ತು ಲೋಕೋಪಯೋಗಿ ಇಲಾಖೆಗಳಲ್ಲೂ ಕಾರ್ಯ ನಿರ್ವಹಿಸಿದ್ದರು.
ಅದೇ ರೀತಿ, ಭಾರತ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ, ಗೃಹ ಸಚಿವಾಲಯಕ್ಕೆ ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
ಇದನ್ನೂ ಓದಿ: ಹೊಸ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಗೆ ಪ್ರಧಾನಿ ನೇತೃತ್ವದ ಸಮಿತಿ ಸಭೆ ಇಂದು