ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ ಸೇರಿದ 97.79 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತಾತ್ಕಾಲಿಕವಾಗಿ ಈ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ಮಾಹಿತಿ ನೀಡಿದರು.
ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಹಲವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೀಗ ಇಡಿ ಮುಂಬೈ ವಲಯ ಕಚೇರಿಯು ರಾಜ್ ಕುಂದ್ರಾ ಎಂದೇ ಕರೆಯಲಾಗುವ ರಿಪು ಸುದನ್ ಕುಂದ್ರಾ ಅವರಿಗೆ ಸೇರಿದ ಮುಂಬೈನ ಜುಹು ಪ್ರದೇಶದಲ್ಲಿರುವ ವಸತಿ ಫ್ಲಾಟ್, ಪುಣೆಯ ವಸತಿ ಬಂಗಲೆ ಮತ್ತು ಇಕ್ವಿಟಿ ಷೇರುಗಳು ಸೇರಿ 97.79 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಪ್ತಿಯಾಗಿರುವ ಆಸ್ತಿಗಳ ಪೈಕಿ ಜುಹುನಲ್ಲಿರುವ ವಸತಿ ಫ್ಲಾಟ್ ಪ್ರಸ್ತುತ ಶಿಲ್ಪಾ ಶೆಟ್ಟಿ ಹೆಸರಿನಲ್ಲಿದೆ. ಪುಣೆಯಲ್ಲಿರುವ ವಸತಿ ಬಂಗಲೆ ಮತ್ತು ಇಕ್ವಿಟಿ ಷೇರುಗಳು ರಾಜ್ ಕುಂದ್ರಾ ಹೆಸರಿನಲ್ಲಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಪ್ರಕರಣವೇನು?: ಬಿಟ್‌ಕಾಯಿನ್‌ಗಳ ಮೂಲಕ ಸಾರ್ವಜನಿಕರಿಂದ ಭಾರಿ ಮೊತ್ತದ ಹಣ ಪಡೆದು (2017ರಲ್ಲಿಯೇ ಇದರ ಮೌಲ್ಯ ಅಂದಾಜು 6,600 ಕೋಟಿ ರೂ. ಆಗಿತ್ತು.) ಬಿಟ್‌ಕಾಯಿನ್‌ಗಳ ರೂಪದಲ್ಲೇ ಪ್ರತಿ ತಿಂಗಳಿಗೆ ಶೇ.10ರಷ್ಟು ಹೆಚ್ಚು ಆದಾಯ ನೀಡುವುದಾಗಿ ಹೇಳಿ ವಂಚಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ವೇರಿಯಬಲ್ ಟೆಕ್ ಪ್ರೈ ಲಿಮಿಟೆಡ್ ಸಂಸ್ಥೆಯ ವಿರುದ್ಧ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.
ಇದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ. ಜನರಿಂದ ಸಂಗ್ರಹಿಸಿದ ಬಿಟ್‌ಕಾಯಿನ್‌ಗಳನ್ನು ಬಿಟ್‌ಕಾಯಿನ್ ಗಣಿಗಾರಿಕೆಗೆ ಬಳಸಬೇಕಿತ್ತು. ಹೂಡಿಕೆದಾರರು ಕ್ರಿಪ್ಟೋ ಸ್ವತ್ತುಗಳಲ್ಲಿ ಆದಾಯ ಪಡೆಯಬೇಕಾಗಿತ್ತು. ಆದರೆ, ಇದರ ಪ್ರವರ್ತಕರು ಹೂಡಿಕೆದಾರರನ್ನು ವಂಚಿಸಿದ್ದಾರೆ. ಅಸ್ಪಷ್ಟ ಆನ್‌ಲೈನ್ ವ್ಯಾಲೆಟ್‌ಗಳಲ್ಲಿ ಅಕ್ರಮವಾಗಿ ಸಂಪಾದಿಸಿದ ಬಿಟ್‌ಕಾಯಿನ್‌ಗಳನ್ನು ಮರೆಮಾಚುತ್ತಿದ್ದಾರೆ ಎಂದು ಇಡಿ ಹೇಳಿದೆ.
ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಮೈನಿಂಗ್ ಕಂಪನಿಯನ್ನು ಸ್ಥಾಪಿಸಲು ಗೇನ್ ಬಿಟ್‌ಕಾಯಿನ್ ಪೊಂಜಿ ಹಗರಣದ ಮಾಸ್ಟರ್ ಮೈಂಡ್ ಮತ್ತು ಪ್ರವರ್ತಕ ಅಮಿತ್ ಭಾರದ್ವಾಜ್ ಅವರಿಂದ ರಾಜ್ ಕುಂದ್ರಾ 285 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. ಈ ಬಿಟ್‌ಕಾಯಿನ್‌ಗಳು ಹೂಡಿಕೆದಾರರಿಂದ ಅಮಿತ್ ಭಾರದ್ವಾಜ್ ಸಂಗ್ರಹಿಸಿದ ಅಪಾದಿತ ಆದಾಯದ ಮೂಲಕ್ಕೆ ಸೇರಿವೆ. ರಾಜ್ ಕುಂದ್ರಾ ಇನ್ನೂ ಈ 285 ಬಿಟ್‌ಕಾಯಿನ್‌ಗಳನ್ನು ತಮ್ಮ ಬಳಿಯೇ ಹೊಂದಿದ್ದಾರೆ. ಅವುಗಳ ಪ್ರಸ್ತುತ ಮೌಲ್ಯ 150 ಕೋಟಿ ರೂಪಾಯಿಗಳಾಗಿವೆ ಎಂದು ಇಡಿ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಇಡಿ ಅನೇಕ ಶೋಧ ಕಾರ್ಯಾಚರಣೆಗಳನ್ನು ನಡೆಸಿ, ಮೂವರನ್ನು ಬಂಧಿಸಿದೆ. 2023ರ ಜನವರಿ 16ರಂದು ನಿಖಿಲ್ ಮಹಾಜನ್, ಡಿಸೆಂಬರ್ 17ರಂದು ಸಿಂಪಿ ಭಾರದ್ವಾಜ್, ಡಿ.29ರಂದು ನಿತಿನ್ ಗೌರ್ ಎಂಬವರನ್ನು ಬಂಧಿಸಿತ್ತು. ಪ್ರಸ್ತುತ ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಮುಖ ಆರೋಪಿಗಳಾದ ಅಜಯ್ ಭಾರದ್ವಾಜ್ ಮತ್ತು ಮಹೇಂದ್ರ ಭಾರದ್ವಾಜ್ ತಲೆಮರೆಸಿಕೊಂಡಿದ್ದಾರೆ. ಈ ಹಿಂದೆ ಇಡಿ 69 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಟೈಮ್ಸ್ ಜಾಗತಿಕ ಪ್ರಭಾವಿಗಳ ಪಟ್ಟಿ: ನಟಿ ಆಲಿಯಾ ಭಟ್, ನಿರ್ದೇಶಕ ದೇವ್ ಪಟೇಲ್ಗೆ ಸ್ಥಾನ