ಉತ್ತರ ಪ್ರದೇಶ: ಉದ್ಯಮಿಗಳಾದ ಗೌತಮ್ ಅದಾನಿ, ಮುಖೇಶ್ ಅಂಬಾನಿಗೆ ಸಹಾಯ ಮಾಡಲು ದೇವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳುಹಿಸಿದ್ದಾನೆಯೇ ಹೊರತು ಬಡವರ ಉದ್ಧಾರಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತಪ್ರದೇಶದ ಡಿಯೋರಿಯಾದಲ್ಲಿ ಮಂಗಳವಾರ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಅವರ 'ನನ್ನನ್ನು ದೇವರು ಕಳುಹಿಸಿದ್ದಾನೆ' ಎಂಬ ಮಾತನ್ನು ಪ್ರಸ್ತಾಪಿಸಿ ಲೇವಡಿ ಮಾಡಿದ ರಾಹುಲ್, ಪ್ರಧಾನಿ ಮೋದಿ ನಂಬಿರುವ ದೇವರು ಅವರನ್ನು ರೈತರು ಮತ್ತು ಕಾರ್ಮಿಕರ ಸೇವೆಗೆ ಕಳುಹಿಸಲಿಲ್ಲ. ಬದಲಿಗೆ ದೇಶದ ಶ್ರೀಮಂತರನ್ನು ಇನ್ನಷ್ಟು ಸಿರಿವಂತರನ್ನಾಗಿ ಮಾಡಲು ಕಳುಹಿಸಿದ್ದಾರೆ ಎಂದು ಕಿಚಾಯಿಸಿದರು.
ಎಲ್ಲರೂ ಜೈವಿಕವಾಗಿ ಜನಿಸುತ್ತಾರೆ. ಆದರೆ, ನರೇಂದ್ರ ಮೋದಿ ಅವರು ಜೈವಿಕವಲ್ಲ. ಅವರು ನೇರವಾಗಿ ಆಕಾಶದಿಂದ ಬಂದವರು. ಮೋದಿಯನ್ನು ದೇವರೇ ನೇರವಾಗಿ ಭಾರತಕ್ಕೆ ಕಳುಹಿಸಿದ್ದಾರೆ. ಅಂಬಾನಿ ಮತ್ತು ಅದಾನಿಗೆ ಸಹಾಯ ಮಾಡಲು ಅವರ 'ಪರಮಾತ್ಮ' ಕಳುಹಿಸಿದ್ದಾರೆ. ದೇವರೇ ಮೋದಿಯನ್ನು ಕಳುಹಿಸಿದ್ದರೆ, ರೈತರು, ಕಾರ್ಮಿಕರು ಮತ್ತು ಬಡವರಿಗೆ ಸಹಾಯ ಮಾಡಲು ಆ ದೇವರು ಕೇಳಬಹುದಿತ್ತಲ್ಲ. ಹಾಗಾದಿದ್ದರೆ, ಇದು ಯಾವ ರೀತಿಯ ದೇವರು, ಇದು ಪ್ರಧಾನಿ ಮೋದಿಯ ವಿಶೇಷ ದೇವರು ಇರಬೇಕು ಎಂದರು.
ಅಗ್ನಿಪಥ ಯೋಜನೆ ಕಸದ ಬುಟ್ಟಿಗೆ: ಅಗ್ನಿಪಥ್ ಯೋಜನೆ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅಗ್ನಿಪಥ್ ಯೋಜನೆಯನ್ನು ಕಸದ ಬುಟ್ಟಿಗೆ ಎಸೆಯುವುದಾಗಿ ಮತ್ತೊಮ್ಮೆ ಗುಡುಗಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ಸೈನಿಕರನ್ನು ಪ್ರಧಾನಿ ಮೋದಿ ಅವರು ಎರಡು ರೀತಿಯಲ್ಲಿ ಇಬ್ಭಾಗ ಮಾಡಿದ್ದಾರೆ. ಅವರಲ್ಲಿ ಒಬ್ಬರಿಗೆ 'ಹುತಾತ್ಮ' ಸ್ಥಾನಮಾನ, ಪಿಂಚಣಿ, ಇತರ ಸೌಲಭ್ಯಗಳು ಸಿಕ್ಕರೆ, ಇನ್ನೊಂದು ಗುಂಪಿಗೆ ಇದ್ಯಾವುದೂ ಸಿಗುವುದಿಲ್ಲ. ಇದ್ಯಾವ ರೀತಿಯ ಯೋಜನೆ ಎಂದು ಪ್ರಶ್ನಿಸಿದರು.
ಬಿಜೆಪಿ ಸಂವಿಧಾನ ಬದಲಾವಣೆಗೆ ಯೋಜಿಸಿದೆ. ವಿಪಕ್ಷಗಳ I.N.D.I.A ಕೂಟ ಇದಕ್ಕೆ ಆಸ್ಪದ ನೀಡುವುದಿಲ್ಲ. ಹೃದಯ, ಜೀವ, ರಕ್ತ ನೀಡಿ ಸಂವಿಧಾನವನ್ನು ರಕ್ಷಣೆ ಮಾಡಲಾಗುವುದು. ಏನೇ ಆದರೂ ಈ ನಿರ್ಧಾರದಿಂದ ಒಂದಿಂಚಿನಷ್ಟು ಹಿಂದೆ ಸರಿಯುವುದಿಲ್ಲ. ಸಂವಿಧಾನವನ್ನು ಬದಲಾಯಿಸಲು ಅವಕಾಶವೇ ನೀಡುವುದಿಲ್ಲ ಎಂದು ಗುಡುಗಿದರು.
ಪ್ರಧಾನಿ ಮೋದಿ ಹೇಳಿದ್ದೇನು?: ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ, ನಾನು ದೇವರಿಂದ ಕಳುಹಿಸಲ್ಲಟ್ಟಿದ್ದೇನೆ ಎಂದುಕೊಳ್ಳುವೆ. ಈ ರೀತಿಯ ಶಕ್ತಿಯು ಕೇವಲ ಜೈವಿಕ ದೇಹದಿಂದ ಮಾತ್ರ ಬರುವುದಿಲ್ಲ. ದೇವರು ಕಳುಹಿಸಿದ ಸಾಧನದಲ್ಲಿ ಮಾತ್ರ ಇದನ್ನು ಕಾಣಲು ಸಾಧ್ಯ. ನನ್ನ ತಾಯಿ ಬದುಕಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ಭಾವಿಸುತ್ತಿದ್ದೆ. ಅವರ ನಿಧನದ ನಂತರ, ನನ್ನ ಅನುಭವಗಳನ್ನು ಅವಲೋಕಿಸಿದಾಗ ನಾನು ದೇವರಿಂದ ಕಳುಹಿಸಲ್ಪಟ್ಟ ಎಂದು ನನಗೆ ಮನವರಿಕೆಯಾಗಿದೆ. ನನ್ನಲ್ಲಿನ ಶಕ್ತಿ ದೇಹದ್ದಲ್ಲ. ಅದನ್ನು ದೇವರು ನೀಡಿದ್ದಾನೆ ಎಂದಿದ್ದರು.