ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಧೇಯಕವನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಂಗಳವಾರದ ಲೋಕಸಭೆಯ ಪಟ್ಟಿ ಮಾಡಲಾದ ಕಾರ್ಯಸೂಚಿಯು ಏಕಕಾಲಿಕ ಚುನಾವಣೆಗಳಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಒಳಗೊಂಡಿದೆ. ಸಂವಿಧಾನದ (ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಮಂಡಿಸಲಿದ್ದಾರೆ.
ಅರ್ಜುನ್ ಮೇಘವಾಲ್, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯಿದೆ 1963, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ಕಾಯ್ದೆ 1991 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ 2019ಕ್ಕೆ ತಿದ್ದುಪಡಿ ಮಾಡಲು ಮಂಗಳವಾರ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಈ ವಿಧೇಯಕ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಯಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಉದ್ದೇಶದಿಂದ ವಿಧಾನಸಭೆಗಳಿಗೆ ಚುನಾವಣೆಗಳನ್ನು ಜೋಡಿಸುವ ಪ್ರಯತ್ನವನ್ನು ಮಾಡುತ್ತಿದೆ.
ತನ್ನ ಸಂಸದರಿಗೆ ಒಂದು ಸಾಲಿನ ವಿಪ್ ಜಾರಿ ಮಾಡಿದ ಬಿಜೆಪಿ: ವಿಧೇಯಕ ಮಂಡನೆಯ ನಿರ್ಧಾರದ ಬೆನ್ನಲ್ಲೇ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮಿತ್ರ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಕೂಡ ಲೋಕಸಭೆಯಲ್ಲಿ ತನ್ನ ಎಲ್ಲ ಸಂಸದರಿಗೆ ವಿಪ್ ಜಾರಿಗೊಳಿಸಿತು. ಶಿವಸೇನೆ (ಶಿಂಧೆ ಬಣ) ಸಹ ತನ್ನ ಎಲ್ಲಾ ಸಂಸದರು ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕೇಳಿಕೊಂಡಿದೆ.
ಕೇಂದ್ರ ಸಚಿವ ಸಂಪುಟವು ಈ ತಿಂಗಳ ಆರಂಭದಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ' ವಿಧೇಯಕ ಮಂಡನೆ ಮಾಡಲು ಅನುಮೋದನೆ ನೀಡಿತ್ತು. ವಿಧೇಯಕದ ಪರಿಚಯದ ನಂತರ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ 'ಒಂದು ರಾಷ್ಟ್ರ ಒಂದು ಚುನಾವಣೆ' ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಯ ವ್ಯಾಪಕ ಸಮಾಲೋಚನೆಗೆ ಶಿಫಾರಸು ಮಾಡುವ ನಿರೀಕ್ಷೆಯಿದೆ. ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಜಂಟಿ ಸಮಿತಿಯನ್ನು ರಚಿಸಲಾಗುತ್ತದೆ.
ಒನ್ ನೇಷನ್ ಒನ್ ಎಲೆಕ್ಷನ್ ವಿಧೇಯಕಕ್ಕೆ ಇಂಡಿ ಒಕ್ಕೂಟದ ವಿರೋಧ: ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಬೆಂಬಲಿಸುತ್ತಿದ್ದರೆ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ವಿಧೇಯಕವನ್ನು ವಿರೋಧಿಸುತ್ತಿವೆ.
ಕೇಂದ್ರ ಸಚಿವ ಸಂಪುಟವು ಸೆಪ್ಟೆಂಬರ್‌ನಲ್ಲಿ ಏಕಕಾಲಿಕ ಚುನಾವಣೆಯ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿತ್ತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದ ಸಮಿತಿ ಕೂಲಂಕಷ ಅಧ್ಯಯನ ನಡೆಸಿ ಈ ಬಗ್ಗೆ ವರದಿಯನ್ನು ನೀಡಿತ್ತು.
ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ತನ್ನ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದೆ. ಎರಡು ಹಂತಗಳಲ್ಲಿ ಏಕಕಾಲಕ್ಕೆ ಚುನಾವಣೆಯನ್ನು ಜಾರಿಗೆ ತರಲು ಸಲಹೆ ನೀಡಲಾಗಿದೆ. ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಮತ್ತು ಸಾರ್ವತ್ರಿಕ ಚುನಾವಣೆಯ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು (ಪಂಚಾಯತ್ ಮತ್ತು ಪುರಸಭೆಗಳು) ನಡೆಸುವಂತೆ ಶಿಫಾರಸು ಮಾಡಲಾಗಿದೆ.
ಇದನ್ನು ಓದಿ:EVM ಹ್ಯಾಕ್ ಆರೋಪ ಮಾಡಿದ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ I.N.D.I.A ಮಿತ್ರಪಕ್ಷಗಳು
ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಳಂಬ ಕ್ರಮ: ತಮಿಳುನಾಡು ಸರ್ಕಾರದ ನಡೆಗೆ ಮದ್ರಾಸ್ ಹೈಕೋರ್ಟ್ ಅಸಮಾಧಾನ