ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕವನ್ನು 10 ದಿನಗಳವೆರೆಗೆ ಮುಂದೂಡುವಂತೆ ಒತ್ತಾಯಿಸಿ ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು. ಈ ವೇಳೆ, ವಿದ್ಯಾರ್ಥಿಗಳು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಯಾವುದೇ ಎಚ್ಚರಿಕೆ ನೀಡದೇ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮಾಹಿತಿಯ ಪ್ರಕಾರ, ಸೋಮವಾರ ಬೆಳಗ್ಗೆಯಿಂದಲೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಪ್ರಾರಂಭಿಸಿದ್ದರು. ಜೊತೆಗೆ ಕಾನೂನು ವಿಭಾಗದ ಗೇಟ್ ಮುಚ್ಚಿ, ಡೀನ್ ವಿಶ್ವವಿದ್ಯಾಲಯದಿಂದ ಹೊರ ಹೋಗದಂತೆ ತಡೆದಿದ್ದರು. ಆಗ ಡೀನ್ ದೆಹಲಿ ಪೊಲೀಸರ ಸಹಾಯ ಕೋರಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಲೇ ಇದ್ದರು.
ಆದರೆ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪೊಲೀಸ್ ಪಡೆಯೊಂದಿಗೆ ಗಲಾಟೆ ಪ್ರಾರಂಭಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ಗೂ ಮುನ್ನ ಪೊಲೀಸರು ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಜೊತೆಗೆ ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಮುಂದುವರಿಸಿದ್ದಾರೆ.
ಆದರೆ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದು, ವಿದ್ಯಾರ್ಥಿಗಳ ಮೇಲೆ ಯಾವುದೇ ಬಲಪ್ರಯೋಗ ಮಾಡಿಲ್ಲ. ಲಾಠಿ ಚಾರ್ಜ್ ಕೂಡ ಮಾಡಿಲ್ಲ. ಗೇಟ್ ತೆರೆಯುವ ಪ್ರಯತ್ನವಷ್ಟೇ ನಡೆದಿದೆ ಎಂದು ವಿವರಿಸಿದ್ದಾರೆ.
ಘಟನೆ ಬಗ್ಗೆ ಡಿಸಿಪಿ ಹೇಳಿದ್ದಿಷ್ಟು: ಉತ್ತರ ಜಿಲ್ಲಾ ಡಿಸಿಪಿ ರಾಜಾ ಬಂಥಿಯಾ ಮಾತನಾಡಿ, "ಮನೆಗೆ ಹೊರಟಿದ್ದ ಕಾನೂನು ವಿಭಾಗದ ಡೀನ್ ಅವರನ್ನು ವಿಶ್ವವಿದ್ಯಾಲಯದಿಂದ ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ನಮಗೆ ದೂರು ಬಂದಿತ್ತು. ಸ್ಥಳಕ್ಕೆ ತೆರಳಿದ ಪೊಲೀಸ್ ಗೇಟ್ ತೆರೆದು ಡೀನ್ ಅವರಿಗೆ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟರು. ಇದರಿಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ವಿದ್ಯಾರ್ಥಿಗಳಿಗೆ ಮಾತುಕತೆ ನಡೆಯುತ್ತಿದ್ದ, ಶೀಘ್ರದಲ್ಲಿ ದೆಹಲಿ ವಿವಿ ಕ್ಯಾಂಪಸ್ನಿಂದ ಪ್ರತಿಭಟನಾನಿರತರನ್ನು ತೆರವು ಗೊಳಿಸಲಾಗುವುದು " ಎಂದು ಘಟನೆ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಕೋಚಿಂಗ್ ಸೆಂಟರ್ನಲ್ಲಿ ಅನಿಲ ಸೋರಿಕೆಯಾಗಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿಗಳು: ಸಂಸ್ಥೆಯನ್ನೇ ಸೀಲ್ ಮಾಡುವಂತೆ ಪ್ರತಿಭಟನೆ